ಕಾರವಾರ: ರಾಜ್ಯದ ಕೃಷಿ ಭೂಮಿ, ಮಠ, ದೇವಸ್ಥಾನ ಜಮೀನುಗಳನ್ನು ಅಕ್ರಮವಾಗಿ ಕಬಳಿಸಲು ವಕ್ಫ್ ಬೋರ್ಡ್ ಹೆಸರಿನಲ್ಲಿ ಷಡ್ಯಂತ್ರ ರೂಪಿಸಿರುವ ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾರವಾರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಉತ್ತರ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಮ್ಮ ಭೂಮಿ ನಮ್ಮ ಹಕ್ಕು ಘೋಷಣಾ ಫಲಕ ಪ್ರದರ್ಶಿಸಿ ವಕ್ಫ್ ಆಸ್ತಿ ಸಂಬಂಧ ನೀಡಿರುವ ನೋಟಿಸ್ಗಳನ್ನು ಹಿಂಪಡೆಯಬೇಕು. ರೈತರು ಹಾಗೂ ಇತರರ ಆಸ್ತಿಯ ಪಹಣಿಯಲ್ಲಿ ದಾಖಲಿಸಿರುವ ವಕ್ಫ್ ಆಸ್ತಿ ಹೆಸರು ತೆಗೆದುಹಾಕಬೇಕು ಎಂದು ಒತ್ತಾಯಿಸಲಾಯಿತು.
ವಕ್ಫ್ ವಿಚಾರದಲ್ಲಿ ಸರ್ಕಾರದ ನಡೆ ಮಿತಿ ಮೀರಿದೆ. ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಒಂದು ವರ್ಗದ ತುಷ್ಟಿಕರಣ ನೀತಿಯ ವಿರುದ್ಧ ಹಾಗೂ ರೈತರ ಭೂಮಿ, ಮಠಮಾನ್ಯಗಳು, ದೇವಾಲಯಗಳ ಆಸ್ತಿಯನ್ನು ರಕ್ಷಿಸುವ ಸಲುವಾಗಿ ಈ ಪ್ರತಿಭಟನೆ ನಡೆಸಲಾಗುತ್ತಿದೆ. ನಮ್ಮ ನೆಲದಲ್ಲಿ ನಾವೇ ಗಟ್ಟಿಯಾಗಿ ನಿಲ್ಲಲು ಅವಕಾಶ ನೀಡದೇ, ವಕ್ಫ್ ಬೋರ್ಡ್ ಬೆಂಬಲಿಸಿ ರಾಜ್ಯ ಕಾಂಗ್ರೆಸ್ ಸರ್ಕಾರ ಷಡ್ಯಂತ್ರ ಮಾಡುತ್ತಿದೆ. ಈ ವಿಚಾರದಲ್ಲಿ ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕು. ಸಾರ್ವಜನಿಕರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳದ ರೀತಿಯಲ್ಲಿ ನಾವು ಅವರನ್ನೆಲ್ಲ ಜೋಪಾನವಾಗಿ ಕಾಪಾಡಿಕೊಳ್ಳಬೇಕಾದ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ವಿಚಾರದಲ್ಲಿ ನಾವು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಮುಂದಿನ ದಿನಗಳಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ನಮ್ಮ ಭೂಮಿಯ ಹಕ್ಕನ್ನು ಕಸಿಯುತ್ತಿರುವ ರಾಜ್ಯ ಸರಕಾರದ ವಿರುದ್ಧದ ಈ ಹೋರಾಟ ಒಂದು ನಿರ್ಣಾಯಕ ಹಂತ ತಲುಪವವರೆಗೂ ಯಾರೂ ವಿರಮಿಸುವುದು ಬೇಡ ಎಂದು ಕರೆ ನೀಡಲಾಯಿತು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ, ರಾಜ್ಯ ವಕ್ತಾರರಾದ ಹರಿಪ್ರಕಾಶ ಕೋಣೆಮನೆ, ಜಿಲ್ಲಾಧ್ಯಕ್ಷರಾದ ಎನ್.ಎಸ್.ಹೆಗಡೆ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕೆ.ಜಿ. ನಾಯ್ಕ, ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ವೆಂಕಟೇಶ ನಾಯ್ಕ ಮತ್ತು ಎಂ.ಜಿ.ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗುರುಪ್ರಸಾದ ಹೆಗಡೆ, ಪ್ರಶಾಂತ್ ನಾಯ್ಕ, ಶಿವಾಜಿ ನರಸಾನಿ, ರಾಮಕೃಷ್ಣ ಆಶ್ರಮದ ಗುರುಗಳಾದ ಶ್ರೀ ಬಾವೇಶಾನಂದ ಸ್ವಾಮೀಜಿಗಳು, ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷರಾದ ರಾಜೇಂದ್ರ ನಾಯ್ಕ, ಜಿಲ್ಲೆಯ ಎಲ್ಲಾ ಮಂಡಲ, ಮೋರ್ಚಾ ಅಧ್ಯಕ್ಷರು, ಪದಾಧಿಕಾರಿಗಳು, ಹಾಗೂ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು, ಸಾರ್ವಜನಿಕರು ಮತ್ತು ರೈತರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.