ದಾಂಡೇಲಿ : ಸ್ವಚ್ಛ ಭಾರತ ಅಭಿಯಾನದ 10ನೇ ವಾರ್ಷಿಕೋತ್ಸವದ ಪ್ರಯುಕ್ತ ಈ ಅಭಿಯಾನದ ಸಾಧನೆಯ ಮೈಲಿಗಲ್ಲನ್ನು ಗೌರವಿಸಲು ನಗರದಾದ್ಯಂತ ಸೆ.17 ರಿಂದ ಅ.1 ರವರೆಗೆ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಕಾರ್ಯಕ್ರಮವನ್ನು ಆಯೋಜಿಸುವ ನಿಟ್ಟಿನಲ್ಲಿ ನಗರಸಭೆಯ ಸಭಾಭವನದಲ್ಲಿ ನಗರಸಭೆಯ ಅಧ್ಯಕ್ಷರಾದ ಅಷ್ಪಾಕ್ ಶೇಖ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯು ಶನಿವಾರ ಜರುಗಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಷ್ಪಾಕ್ ಶೇಖ ಅವರು ಸೆ: 17 ರಿಂದ ಅ:1 ರವರೆಗೆ ನಗರದ ವಿವಿಧ ಆಯ್ದ ಪ್ರದೇಶಗಳಲ್ಲಿ ನಗರಾಡಳಿತ, ತಾಲೂಕಾಡಳಿತ ಹಾಗೂ ವಿವಿಧ ಇಲಾಖೆಗಳ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಸ್ವಚ್ಛತಾಹಿ ಸೇವಾ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಸ್ವಚ್ಛತಾ ಕಾರ್ಯಕ್ರಮದ ಜೊತೆ ಜೊತೆಗೆ ಸ್ವಚ್ಛತೆಯ ಕುರಿತಂತೆ ಜಾಗೃತಿಯನ್ನು ಮೂಡಿಸಲು ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸ್ವಚ್ಛತೆಯ ಕುರಿತಂತೆ ಅಲ್ಲಲ್ಲಿ ನಾಮಫಲಕ ಅಳವಡಿಕೆ, ಗೋಡೆ ಬರಹ, ಬೀದಿ ನಾಟಕ ಮತ್ತು ವಿವಿಧ ಪ್ರಕಾರಗಳಲ್ಲಿ ಮಾಹಿತಿಯನ್ನು ನೀಡುವ ಮೂಲಕ ಸ್ವಚ್ಛತೆಯ ಬಗ್ಗೆ ಜನ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಮಾಡಲಾಗುತ್ತದೆ. ಈ ಅಭಿಯಾನದಲ್ಲಿ ವಿವಿಧ ಸಂಘ-ಸಂಸ್ಥೆಗಳು, ನಗರದ ನಾಗರಿಕರು, ಶಾಲಾ – ಕಾಲೇಜು ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಚಂದಗಾಣಿಸಿ ಕೊಡಬೇಕೆಂದು ವಿನಂತಿಸಿದರು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಶೈಲೇಶ ಪರಮಾನಂದ, ಹಾಗೂ ಪೌರಾಯುಕ್ತರಾದ ರಾಜಾರಾಮ ಪವಾರ್ ಸ್ವಚ್ಛಾತಾಹಿ ಸೇವಾ ಅಭಿಯಾನದ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ನಗರಸಭೆಯ ಸದಸ್ಯರು, ಕಸಾಪ ಜಿಲ್ಲಾಧ್ಯಕ್ಷರಾದ ಬಿ.ಎನ್.ವಾಸರೆ, ನಗರಸಭೆಯ ಅಧಿಕಾರಿಗಳು, ಸಿಬ್ಬಂದಿಗಳು, ಶಿಕ್ಷಣ ಇಲಾಖೆ ಮತ್ತು ಸಾರಿಗೆ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.