ದಾಂಡೇಲಿ : ನಗರದ ಅಂಬೇವಾಡಿಯಲ್ಲಿರುವ ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಭಾರಿ ಪ್ರಾಚಾರ್ಯರಿಂದ ಶಾಲೆಯ ವಿದ್ಯಾರ್ಥಿಗಳಲ್ಲಿ ಭಯದ ವಾತವರಣ ನಿರ್ಮಾಣವಾಗುತ್ತಿದ್ದು, ಅವರ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಆಗ್ರಹಿಸಿ ಅಂಬೇಡಿಯಲ್ಲಿರುವ ತಾಲೂಕು ಆಡಳಿತ ಸೌಧದಲ್ಲಿ ಉಪ ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಬಿಜೆಪಿ ಎಸ್.ಸಿ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಭೀಮುಶಿ ಬಾದುಲಿ ಸೋಮವಾರ ಲಿಖಿತ ಮನವಿ ನೀಡಿದರು.
ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯಲ್ಲಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಭಾರಿ ಪ್ರಾಚಾರ್ಯರಾದ ವಿಕ್ರಮ ಅಣ್ಣಪ್ಪ ಉದ್ದಂಡಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಸುಖಾಸುಮ್ಮನೆ ಹೊಡೆಯುವುದು. ಬೆದರಿಸುವುದು. ತಮ್ಮ ಮಾತನ್ನು ಕೆಳದಿದ್ದರೆ ಇಂಟರ್ನಲ್ ಮಾರ್ಕ್ ಕಡಿಮೆ ಮಾಡುತ್ತೇನೆಂದು ಬೆದರಿಸುತ್ತಿರುವುದರಿಂದ ಮಕ್ಕಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿರುತ್ತದೆ. ಶಿಕ್ಷಕರು ಹೇಳಿಕೊಟ್ಟ ಹಾಗೆ ಇನ್ನೊಬ್ಬರ ಮೇಲೆ ದೂರು ನೀಡುವುದು, ತದನಂತರ ನರ್ಸಗಳ ಮೇಲೆ, ರಾತ್ರಿ ಕಾವಲುಗಾರರ ಮೇಲೆ, ಡಿ-ಗ್ರೂಪ್ ಸಿಬ್ಬಂದಿಗಳ ಮೇಲೆ, ಅತಿಥಿ ಶಿಕ್ಷಕರ ಮೇಲೆ ತಮ್ಮ ಪರವಾಗಿ ಇದ್ದವರನ್ನು ಬಿಟ್ಟು ಉಳಿದ ಎಲ್ಲಾ ಸಿಬ್ಬಂದಿಗಳ ಮೇಲೆ ದೂರು ನೀಡುವಂತೆ ಬೆದರಿಸುತ್ತಾರೆ. ಇದು ಮಕ್ಕಳ ಹಕ್ಕು ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಇವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ಸರ್ಕಾರದ ಯಾವುದೇ ಆದೇಶವನ್ನು ಪಾಲಿಸದೆ ತಮ್ಮ ಮೊಂಡುತನವನ್ನು ತೊರಿಸುತ್ತಿದ್ದಾರೆ. ಇದನ್ನು ಪ್ರಶ್ನಿಸಲು ಹೋದರೆ ರಾಜಕಿಯ ಪ್ರಭಾವ, ಮೇಲಾಧಿಕಾರಿಗಳ ಪ್ರಭಾವ ತೋರಿಸುತ್ತಾರೆ. ಈ ವಿಷಯವನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಯಾವುದೇ ಕ್ರಮವನ್ನು ಕೈಕೊಳ್ಳದೆ ಅವರನ್ನು ಉಳಿಸಲು ಪ್ರಯತ್ನಿಸುತ್ತಾರೆ. ನಾವು ಪ್ರಶ್ನಿಸುತ್ತೇವೆಂದು ಫೋನ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಾರೆ. ಇಲ್ಲವಾದಲ್ಲಿ ಕರೆ ಸ್ವೀಕರಿಸುವುದಿಲ್ಲ.
ಈ ನಿಟ್ಟಿನಲ್ಲಿ ಮಕ್ಕಳ ಹಿತದೃಷ್ಟಿಯಿಂದ ಈ ಕೂಡಲೇ ಪ್ರಭಾರಿ ಪ್ರಾಚಾರ್ಯರ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.