ದಾಂಡೇಲಿ : ಉತ್ತರಕನ್ನಡ ಜಿಲ್ಲೆಯ ಕಾರವಾರದ ಕೋಡಿಬಾಗ – ಸದಾಶಿವಘಡದಲ್ಲಿ ಆ.7 ರಂದು ಕುಸಿದು ಬಿದ್ದ ಸೇತುವೆ ಪ್ರದೇಶಕ್ಕೆ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಕಾಳಿ ಸೇತುವೆ ಕುಸಿತ ದುರದೃಷ್ಟಕರವಾಗಿದ್ದರೂ, ಘಟನೆಯಿಂದ ಯಾರಿಗೂ ತೊಂದರೆಯಾಗದಿರೋದು ಅದೃಷ್ಟ ಎಂದರು. ಕಾರವಾರ ನಗರದಲ್ಲಿ 1984ರಲ್ಲಿ ನಿರ್ಮಾಣವಾದ ಸೇತುವೆ ಜನರ ಓಡಾಟ ಮಾತ್ರವಲ್ಲದೇ ಪ್ರವಾಸೋದ್ಯಮ, ವಾಣಿಜ್ಯ ಉದ್ದೇಶಗಳಿಗೂ ಸಾಕಷ್ಟು ನೆರವು ನೀಡಿತ್ತು. ಇದೀಗ ಒಂದೇ ಸೇತುವೆ ಇರುವ ಹಿನ್ನಲೆ ಸಾಕಷ್ಟು ವಾಹನ ದಟ್ಟಣೆ ಉಂಟಾಗುತ್ತಿದ್ದು, ನೂತನ ಸೇತುವೆ ನಿರ್ಮಾಣವಾಗಬೇಕಿದೆ. ಈ ಬಗ್ಗೆ ಈಗಾಗಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದು, ಹಳೆಯ ವಿನ್ಯಾಸ, ಇಲ್ಲವೇ ಹೊಸ ವಿನ್ಯಾಸದಲ್ಲಿ ಸೇತುವೆ ನಿರ್ಮಿಸಬೇಕು ಎನ್ನುವುದನ್ನು ಚರ್ಚಿಸಿ ಆದಷ್ಟು ಶೀಘ್ರದಲ್ಲಿ ಸೇತುವೆ ನಿರ್ಮಾಣವಾಗುವಂತೆ ಪ್ರಯತ್ನಿಸೋದಾಗಿ ತಿಳಿಸಿದರು.