ಯಲ್ಲಾಪುರ: ತಾಲೂಕಿನ ಚಂದಗುಳಿ ಗ್ರಾ.ಪಂ ಸಭಾಭವನದಲ್ಲಿ ಪ್ರಸಕ್ತ ಸಾಲಿನ ಮೊದಲ ಸುತ್ತಿನ ಗ್ರಾಮಸಭೆ ಗ್ರಾ.ಪಂ.ಅಧ್ಯಕ್ಷೆ ಶಿಲ್ಪಾ ರವಿ ನಾಯ್ಕ ಅಧ್ಯಕ್ಷತೆಯಲ್ಲಿ ನಡೆಯಿತು.
ತೋಟಗಾರಿಕಾ ಇಲಾಖೆಯ ಅಧಿಕಾರಿ ಸುಭಾಸ್ ಹೆಗಡೆ ,ಅಡಕೆಗೆ ಎಲೆಚುಕ್ಕೆ ರೋಗ,ಅಡಕೆ ಮುಗುಡು ಉದುರುವಿಕೆ ತಡೆಗೆ, ಕಾಳುಮೆಣಸುಗಳಿಗೆ ತಗಲುವ ರೋಗ, ತಡೆಗಟ್ಟುವ ಕ್ರಮದ ಬಗ್ಗೆ ಮಾಹಿತಿ ನೀಡಿದರು.
ಸಹಾಯಕ ಕೃಷಿ ನಿರ್ದೇಶಕ ನಾಗರಾಜ ನಾಯ್ಕ ಮಾಹಿತಿ ನೀಡಿ, ಸರ್ಕಾರದಿಂದ ಅಧಿಕ ಇಳುವರಿ ಭತ್ತದ ಬೀಜಗಳನ್ನು ನೀಡುತ್ತಿದ್ದು ರೈತರು ಅದರ ಪ್ರಯೋಜನ ಪಡೆಯುವಂತೆ ಕೋರಿದರು. ಇದಕ್ಕೆ ರೈತರು ನಮ್ಮ ಪ್ರದೇಶಕ್ಕೆ ಬೇಕಾದ ಭತ್ತದ ಬೀಜಗಳನ್ನು ಪೂರೈಸುವಂತಾಗಬೇಕು. ಸರ್ಕಾರ ನೀಡುವ ಅಧಿಕ ಇಳುವರಿ ಭತ್ತ ಈ ಪ್ರದೇಶದಲ್ಲಿ ಬೆಳವಣಿಗೆ ಕಾಣುವುದಿಲ್ಲ. ಅದಕ್ಕೆ ರೋಗಗಳು ಜಾಸ್ತಿ, ಸ್ಥಳೀಯ ತಳಿಯ ಭತ್ತದ ಬೀಜ ಕೊಡಿ ಎಂದು ಆಗ್ರಹಿಸಿದರು.
ಮುಂಡಗೋಡ ಮಾರ್ಗದ ಬಸ್ಸುಗಳನ್ನು ಹುಣಶೆಟ್ಟಿಕೊಪ್ಪದ ಬಳಿಕ ಕುಚಗಾಂವ ಹಾಗೂ ಇತರೆಡೆ ಇನ್ನೆಲ್ಲೂ ಸರಿಯಾಗಿ ನಿಲುಗಡೆ ಮಾಡುತ್ತಿಲ್ಲ. ಶಾಲಾ ಮಕ್ಕಳು ಅತಂತ್ರರಾಗುತ್ತಿದ್ದಾರೆ ಎಂದು ಸಹಸ್ರಳ್ಳಿಯ ಶೇಷು ನಾಯ್ಕ ದೂರಿದರು. ಸಭೆಗೆ ಬಾರದೇ ಇರುವ ಅರಣ್ಯ ಇಲಾಖೆ ಮತ್ತು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲು ನಿರ್ಧರಿಸಲಾಯಿತು.
ಜಂಬೆಸಾಲ್ ಶಾಲೆ ಸೋರುತ್ತಿದೆ. ಇದನ್ನು ಸರಿಪಡಿಸಿ, ಇಲ್ಲವೇ ಹೊಸಕಟ್ಟಡ ಮಾಡಿಕೊಡಿ ಎಂದು ಜಂಬೆಸಾಲ್ ಗ್ರಾಮಸ್ಥರು ಆಗ್ರಹಿಸಿದರು. ಉಪಳೇಶ್ವರದಲ್ಲಿ ಸಾರ್ವಜನಿಕರು, ಕ್ರೀಡಾಪ್ರೇಮಿಗಳು ಬಹಳ ವರ್ಷದಿಂದ ಕ್ರೀಡಾಂಗಣವಾಗಿ ಬಳಸಿಕೊಂಡು ಬಂದ ಸ್ಥಳವನ್ನು ಬಾಹ್ಯ ವ್ಯಕ್ತಿಗಳು ಅಕ್ರಮಿಸುತ್ತಿದ್ದಾರೆ. ಅಧಿಕಾರಿಗಳ ನಡೆ ಈ ವಿಷಯದಲ್ಲಿ ಸಂಶಯಕ್ಕೆ ಎಡೆಮಾಡಿದೆ. ಈ ಜಾಗ ಅನ್ಯರಿಗೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಯಾರೇ ಈ ಜಾಗ ಅತಿಕ್ರಮಿಸಲು ಹುನ್ನಾರ ನಡೆಸಿದರೆ ಮುಂದೆ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಪ್ರಮೋದ ಹೆಗಡೆ ಜಂಬೆಸಾಲ್ ಎಚ್ಚರಿಸಿದರು.
ನೊಡೆಲ್ ಅಧಿಕಾರಿ ಎನ್.ಆರ್.ಹೆಗಡೆ, ಗ್ರಾ.ಪಂ ಉಪಾಧ್ಯಕ್ಷೆ ಶಾರದಾ ಭಾಗ್ವತ, ಸದಸ್ಯರಾದ ಆರ್.ಎಸ್.ಭಟ್ಟ, ನೇತ್ರಾವತಿ ಹೆಗಡೆ, ರೇಣುಕಾ ಸಿದ್ದಿ, ಅಶೋಕ ಮರಾಠಿ, ಸುಬ್ಬಣ್ಣ ಉದ್ದಾಬೈಲ್, ಸುಭಾಸ ಗಡಸ್ಕರ್, ವಿಶ್ವನಾಥ ಅಡಿಕೆಸರ, ಪಿಡಿಒ ರಾಜೇಶ ಶೇಟ್, ಕಾರ್ಯದರ್ಶಿ ತುಕಾರಾಮ ನಾಯ್ಕ ಇತರರಿದ್ದರು.