ಸಿದ್ದಾಪುರ: ಭಗವಂತನ ನಾಮ ಜಪ, ಧ್ಯಾನ ಮಾಡುತ್ತಾ ನಾವು ಜೀವನ ಪಾವನ ಮಾಡಿಕೊಳ್ಳಬೇಕು. ನಾಮಸ್ಮರಣೆ ಜೊತೆಗೆ ಭಗವಂತನ ಕುರಿತು ಚಿಂತನೆ ಮಾಡುತ್ತ ನಮ್ಮ ದಿನ ನಿತ್ಯದ ವ್ಯವಹಾರ ಕೂಡ ಮಾಡಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಕರ್ಕಿ ದೈವಜ್ಞ ಪೀಠದ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾ ಸ್ವಾಮಿಗಳವರು ನುಡಿದಿದ್ದಾರೆ.
ಅವರು ಕಾನಸೂರಿನ ಶ್ರೀ ರಾಮೇಶ್ವರ ದೇವರ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ನಡೆದ ಧರ್ಮಸಭೆಯಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ಮಾಡಿದರು. ವೇದಿಕೆಯಲ್ಲಿ ಸಾನಿಧ್ಯ ವಹಿಸಿ ಪ್ರವಚನ ಮಾಡಿದ ಶಿರಳಗಿ ರಾಜಾರಾಮ ಆಶ್ರಮದ ಶ್ರೀ ಶ್ರೀ ಬ್ರಹ್ಮಾoನಂದ ಸ್ವಾಮಿಗಳವರು, ಇಡಿ ಜಗತ್ತಿನ ನಿಯಾಮಕ ಈಶ್ವರ ಎಂದರು. ನಮ್ಮೆಲ್ಲರ ಕೆಲಸದ ಮಧ್ಯೆ ಕೂಡ ದೇವರ ಜ್ಞಾನ ಮಾಡಬೇಕು. ಅದರಿಂದಲೇ ಸಂತಸ, ಸಂಭ್ರಮ ದೊರೆಯುತ್ತದೆ ಎಂದರು. ಕಾನಸೂರು ದೇವಸ್ಥಾನದ ಮುಖ್ಯಸ್ಥರಾದ ಸಾದ್ವಿ ಸಾವಿತ್ರಮ್ಮ ಸ್ವಾಗತ ಕೋರಿ ಮಾತನಾಡಿ ಗುರುಗಳ ಬಗ್ಗೆ, ಹಿರಿಯರ ಬಗ್ಗೆ ಸದ್ಭಾವನೆ ಇರಬೇಕು ಎಂದರು. ಈಶ್ವರೀಯ ವಿಶ್ವ ವಿದ್ಯಾಲಯದ ಬಿ. ಕೆ. ದೇವಿಕಾ ಮತ್ತು ಬಿ. ಕೆ. ಅರುಣಾ ಮಾತನಾಡಿದರು. ಕರ್ಕಿ ಮಠದ ಟ್ರಸ್ಟಿಗಳಾದ ಗಣಪತಿ ಕಾಗೇರಿ ವೇದಿಕೆಯಲ್ಲಿದ್ದರು. ಪತ್ರಕರ್ತ ಉದಯಕುಮಾರ್ ಕಾನಳ್ಳಿ ನಿರೂಪಣೆ ಮಾಡಿ ಕೊನೆಯಲ್ಲಿ ವಂದಿಸಿದರು.ವಾರ್ಷಿಕೋತ್ಸವದ ನಿಮಿತ್ತ ದೇವಸ್ಥಾನದಲ್ಲಿ ರುದ್ರ ಹವನ, ದುರ್ಗಾ ಹವನ, ಗಣ ಹವನ ಹಾಗೂ ಶ್ರೀ ದೇವರಲ್ಲಿ ಅಲಂಕಾರ ಪೂಜೆ, ಮಹಾಮಂಗಳಾರತಿ ನೆರವೇರಿತು.ಕೇಶವ ಶೇಟ್ ಮತ್ತು ಜಯಲಕ್ಷ್ಮಿ ದಂಪತಿಗಳು ಶ್ರೀಗಳ ಪಾದಪೂಜೆ ನೆರವೇರಿಸಿದರು. ಈಶ್ವರೀಯ ವಿಶ್ವವಿದ್ಯಾಲಯದವರು ಸಹಸ್ರಾಧಿಕ ಈಶ್ವರ ಲಿಂಗ ದರ್ಶನ ಭಾಗ್ಯ ಒದಗಿಸಿದ್ದು ಎಲ್ಲರ ಪ್ರಶoಸೆಗೆ ಪಾತ್ರ ವಾಯಿತು.ಶ್ರೀದ್ವಯರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು.