ಬನವಾಸಿ (ಶಿರಸಿ): ಬಿಜೆಪಿ ನಮ್ಮ ಕಾರ್ಯಕರ್ತರನ್ನ ಹಾಗೂ ನಾಯಕರನ್ನ ನಡೆಸಿಕೊಂಡ ರೀತಿಯಿಂದ ಬೇಸರಗೊಂಡು ವಾಪಸ್ ನಮ್ಮ ಮೂಲ ಪಕ್ಷವಾದ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದೇವೆ ಎಂದು ಯುವ ಮುಖಂಡ ಶಾಸಕ ಶಿವರಾಮ್ ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್ ಹೇಳಿದರು.
ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕೈದು ತಿಂಗಳಿಂದ ಹೆಬ್ಬಾರ್ ಅವರು ಬಿಜೆಪಿ ತೊರೆಯುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಬಿಜೆಪಿಗೆ ಈ ಹಿಂದೆ ಸೇರಿ ಸರ್ಕಾರ ತಂದೆವು, ಆದರೆ ನಂತರ ಅವರು ನಮ್ಮೊಂದಿಗೆ ನಡೆಸಿಕೊಂಡ ರೀತಿ ಸರಿಯಾಗಿರಲಿಲ್ಲ ಎಂದರು.
ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿರುವ ಡಾ.ಅಂಜಲಿ ನಿಂಬಾಳ್ಕರ್ ಅವರನ್ನ ಗೆಲ್ಲಿಸಲು ಎಲ್ಲರೂ ಕಾಂಗ್ರೆಸ್ ಸೇರಿದ್ದೇವೆ. ನಮ್ಮಿಂದ ಇನ್ನೂ ಹೆಚ್ಚಿನ ಮತ ಕಾಂಗ್ರೆಸ್ ಪಕ್ಷಕ್ಕೆ ಬರಲು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು. ಬನವಾಸಿ ವ್ಯಾಪ್ತಿಯ ಹತ್ತು ಪಂಚಾಯತ್ ನಲ್ಲಿ ಅತ್ಯಧಿಕ ಮತ ಕಾಂಗ್ರೆಸ್ ಪಕ್ಷಕ್ಕೆ ಬರಲು ಎಲ್ಲರೂ ದುಡಿಯಬೇಕು ಎಂದರು.
ಯಾವುದೇ ಅಧಿಕಾರದ ಆಸೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರಿಲ್ಲ. ಬಿಜೆಪಿ ಸೇರುವಂತೆ ಕಾರ್ಯಕರ್ತರು ನಾಲ್ಕೈದು ತಿಂಗಳಿನಿಂದ ಮನವಿ ಮಾಡಿಕೊಳ್ಳುತ್ತಿದ್ದರು. ಅವರ ಧ್ವನಿಗೆ ಓಗೊಟ್ಟು ಕಾಂಗ್ರೆಸ್ ಸೇರುತ್ತಿದ್ದೇವೆ. ಪ್ರತಿ ಪಂಚಾಯತ್ ಹಂತದಲ್ಲಿ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ಮುಂದಿನ ದಿನದಲ್ಲಿ ನಡೆಯಲಿದೆ, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಗೆಲುವು ಸಹ ಖಚಿತ ಎಂದರು.
ಕೆಪಿಸಿಸಿ ಉಪಾಧ್ಯಕ್ಷ ಐವಾನ್ ಡಿಸೋಜಾ ಮಾತನಾಡಿ, ದೇಶಾದ್ಯಂತ ಇರುವ ಬಿಜೆಪಿಯ ಸರ್ವಾಧಿಕಾರದ ನಡೆಯನ್ನ ಸರಿಪಡಿಸಲು ಪರಿವರ್ತನೆ ಪ್ರಾರಂಭವಾಗಿದೆ. ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಬಿಜೆಪಿಯಲ್ಲಿ ಗ್ರಾಮ ಮಟ್ಟದಲ್ಲೂ ಉಸಿರುಗಟ್ಟುವ ಪರಿಸ್ಥಿತಿ ಇದ್ದರೆ, ದೇಶದಲ್ಲಿ ಇನ್ಯಾವ ಪರಿಸ್ಥಿತಿ ಇರಬಹುದು ಎಂದು ಮತದಾರರು ಯೋಚಿಸಬೇಕು. ಇಡೀ ದೇಶದಲ್ಲಿ ಓಡಾಟ ನಡೆಸಿದಾಗ ಬಿಜೆಪಿ ಹತ್ತು ವರ್ಷದ ಆಡಳಿತ ಜನ ವಿರೋಧಿ ಆಡಳಿತ ಎಂದು ಜನರೇ ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇಂದು ಬಿಜೆಪಿ ಸೋಲಿಸಬೇಕು, ಮತ್ತೆ ಪ್ರಜಾಪ್ರಭುತ್ವ ಉಳಿಸಬೇಕು ಎಂದು ಕಾಂಗ್ರೆಸ್ ನೊಂದಿಗೆ ಹಲವರು ಕೈ ಜೋಡಿಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವವರನ್ನ ಸೇರಿಸಿಕೊಂಡು ಬರುವಂತೆ ಸೂಚನೆ ನೀಡಿದ್ದಾರೆ. ಪಕ್ಷಕ್ಕೆ ಬಂದವರು ಇಂದಿನಿಂದಲೇ ಪಕ್ಷ ಸಂಘಟನೆ ಮಾಡಲು ಪ್ರಾರಂಭಿಸಿ ಎಂದು ಕರೆ ನೀಡಿದ ಅವರು, ಈ ಹಿಂದೆ ಬಿಜೆಪಿಗರು ಗ್ಯಾರಂಟಿ ಯೋಜನೆ ಜಾರಿಯಾಗುವುದಿಲ್ಲ ಎಂದಿದ್ದರು. ಆದರೆ ಆ ಐದು ಗ್ಯಾರಂಟಿ ಜಾರಿಗೆ ತಂದು ಜನರಿಗೆ ಮುಟ್ಟಿಸಿದ್ದೇವೆ. ಇದಕ್ಕೆ ಕಾರಣ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು. ಇಂದು ಜನರು ನೆಮ್ಮದಿಯಿಂದ ಬದುಕುವಂತೆ ಕಾಂಗ್ರೆಸ್ ಮಾಡಿದೆ ಎಂದರು.
ಬಿಜೆಪಿ ರಾಜ್ಯದ 28 ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎನ್ನುತ್ತಿದ್ದಾರೆ. ಮೊದಲು ಅಧಿಕಾರ ಉಳಿಸಿಕೊಳ್ಳಲು ಅವರು ನೋಡಲಿ, ಬಿಜೆಪಿ ವಿರುದ್ಧ ದೊಡ್ಡ ಅಲೆಯೊಂದು ಎದ್ದಿದೆ. ಬಡವರಿಗೆ ಸಹಾಯ ಮಾಡಿದರೆ ಬಿಟ್ಟಿ ಭಾಗ್ಯ ಎನ್ನುತ್ತಾರೆ, ಅಂಬಾನಿ ಅಧಾನಿ ಕೋಟ್ಯಾಂತರ ರೂಪಾಯಿ ಸಾಲ ಮನ್ನಾ ಮಾಡಿದರೆ ಅದು ಯಾವ ಭಾಗ್ಯವೆಂದು ಬಿಜೆಪಿಗರು ಹೇಳಲಿ ಎಂದ ಅವರು, ಪ್ರಜಾಪ್ರಭುತ್ವ ಉಳಿಯಬೇಕಾದರೆ, ದೇಶದಲ್ಲಿ ಎಲ್ಲರೂ ಸಮಾನವಾಗಿ ಬದುಕಬೇಕಾದರೆ, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ತಂದಂತೆ ದೇಶದಲ್ಲಿ ತರಬೇಕು. ಈ ಬಾರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಅವರನ್ನ ಗೆಲ್ಲಿಸಲು ಎಲ್ಲರು ಶ್ರಮ ವಹಿಸಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ್ ಮಾತನಾಡಿ, ವಿವೇಕ್ ಹೆಬ್ಬಾರ್ ಪಕ್ಷ ಸೇರ್ಪಡೆಯಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಆನೆಬಲ ತಂದಂತಾಗಿದೆ. ಪಕ್ಷ ಸೇರಿದವರು ಪಕ್ಷಕ್ಕೆ ನಿಷ್ಟರಾಗಿ ಸಂಘಟನೆ ಮಾಡಿ. ಕಾಂಗ್ರೆಸ್ ಜಾತ್ಯಾತೀತ ಪಕ್ಷ, ಎಲ್ಲಾ ಜಾತಿ, ಧರ್ಮದವರನ್ನ ಸಮಾನವಾಗಿ ನೋಡುವ ಪಕ್ಷ. ಜಾತ್ಯಾತೀತ ರಾಷ್ಟ್ರ ನಿರ್ಮಾಣಕ್ಕೆ ಕಾಂಗ್ರೆಸ್ ಪ್ರಮುಖ ಕಾರಣವಾಗಿದೆ. ಕಾಂಗ್ರೆಸ್ ಸೇರಿದವರು ಇನ್ನುಮುಂದೆ ಎದೆ ತಟ್ಟಿ ತಾನು ಕಾಂಗ್ರೆಸ್ಸಿಗ ಎಂದು ಹೇಳಿ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಫ್.ನಾಯ್ಕ, ಮಾಜಿ ಸೇವಾದಳ ಮುಖ್ಯಸ್ಥ ಶಂಕರ ಗೌಡ ಪಾಟೀಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೆಗಡೆ ಹೊಸಬಾಳೆ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ, ಆರ್.ಹೆಚ್.ನಾಯ್ಕ, ರವಿ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.