Slide
Slide
Slide
previous arrow
next arrow

ಜವಾಬ್ದಾರಿ, ಕರ್ತವ್ಯಗಳಿಗೆ ಬದ್ಧರಾಗಿ ಕೆಲಸ ನಿರ್ವಹಿಸಿ: ಈಶ್ವರಕುಮಾರ ಕಾಂದೂ

300x250 AD

ಕಾರವಾರ: ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿರುವ ನಾವೆಲ್ಲರೂ ಸಂವಿಧಾನದ ಪೀಠಿಕೆಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ ಅರ್ಥೈಸಿಕೊಳ್ಳುವ ಮೂಲಕ ಸಂವಿಧಾನದಲ್ಲಿ ತಿಳಿಸಿರುವ ನಮ್ಮ ನಮ್ಮ ಜವಾಬ್ದಾರಿ, ಹಕ್ಕು ಹಾಗೂ ಕರ್ತವ್ಯಗಳಿಗೆ ಬದ್ಧರಾಗಿ ಒಂದು ತಂಡವಾಗಿ ಒಗ್ಗಟ್ಟಿನಿಂದ ಕೆಲಸ ಕಾರ್ಯ ಮಾಡಿದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ ಕಾಂದೂ ಹೇಳಿದರು.

ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿ ಶುಕ್ರವಾರ ಜರುಗಿದ 75ನೇ ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿದ ಅವರು ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿ, ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಈ ದೇಶದ ಸಂವಿಧಾನ ರಚನೆಯ ಸಂದರ್ಭದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಈ ಅಂಶವನ್ನ ಗಮನದಲ್ಲಿರಿಸಿಕೊಂಡೇ ಪೀಠಿಕೆಯಲ್ಲಿ ನಾವೆಲ್ಲರೂ ಭಾರತೀಯರು ಎಂಬ ಸಂಗತಿಯನ್ನ ಸೇರಿಸಿದ್ದಾರೆ. ಹೀಗಾಗಿ ಪ್ರತಿಯೊಬ್ಬಅಧಿಕಾರಿ, ಸಿಬ್ಬಂದಿ ಸಂವಿಧಾನದ ಪೀಠಿಕೆಯನ್ನ ಸಮಗ್ರವಾಗಿ ಓದಿ ಅರ್ಥೈಸಿಕೊಂಡು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು. ಕಳೆದ ಒಂದು ವರ್ಷದಿಂದ ಪ್ರಸ್ತುತ ಗಣರಾಜ್ಯೋತ್ಸವ ದಿನದವರೆಗೂ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಉತ್ತಮವಾಗಿ ಕೆಲಸ ಕಾರ್ಯ ನಿರ್ವಹಿಸುವ ಮೂಲಕ ಅಗತ್ಯ ಸಹಾಯ, ಸಹಕಾರ ನೀಡಿದ್ದೀರಿ. ಇದರ ಪರಿಣಾಮವಾಗಿ ಜನಪರ ಯೋಜನೆಗಳಾದ ಮಹಾತ್ಮಗಾಂಧಿ ನರೇಗಾ, ಎಸ್ಬಿಎಂ, ಎನ್ಆರ್ಎಲ್ಎಂ, ವಸತಿ, 14-15ನೇ ಹಣಕಾಸು ಹಾಗೂ ಜೆಜೆಎಂ ಕಾಮಗಾರಿಗಳನ್ನು ಸಮರ್ಪಕವಾಗಿ ಗ್ರಾಮೀಣ ಜನರಿಗೆ ತಲುಪಿಸುವ ಪ್ರಯತ್ನ ಮಾಡಲಾಗಿದೆ. ಈ ತಮ್ಮ ಸಹಾಯ, ಸಹಕಾರ ಹಾಗೂ ಜವಬ್ದಾರಿಯುತ ಕರ್ತವ್ಯ ನಿಷ್ಠೆಯನ್ನು ಹೀಗೆ ಮುಂದುವರೆಸಿ ಹೆಚ್ಚಿನ ಸಾಧನೆಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ-2023ರಲ್ಲಿ ಜಿಲ್ಲಾ, ತಾಲ್ಲೂಕಾ ಹಾಗೂ ಗ್ರಾಮ ಪಂಚಾಯತಿಗಳ ಪ್ರತಿಯೊಬ್ಬ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲಾಧಿಕಾರಿಯಾಗಿ ನಾನು ಸೂಚಿಸಿದ ಕೆಲಸಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಕಾರಣದಿಂದ ಜಿಲ್ಲೆಯ ಸ್ವೀಪ್ ನೊಡಲ್ ಅಧಿಕಾರಿಗಳಾಗಿ ಸ್ವೀಪ್ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ. ಇದನ್ನು ರಾಜ್ಯ ಚುನಾವಣಾ ಆಯೋಗ ಗುರುತಿಸಿ ರಾಷ್ಟ್ರೀಯ ಮತದಾರರ ದಿನ-2024ರ ನಿಮಿತ್ತ ಕೊಡಮಾಡುವ ರಾಜ್ಯ ಮಟ್ಟದ ಅತ್ಯುತ್ತಮ ಸ್ವೀಪ್ ನೊಡಲ್ ಅಧಿಕಾರಿ ಎಂಬ ಪ್ರಶಸ್ತಿಗೆ ಭಾಜನವಾಗಿ 14ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಗೌರವಾನ್ವಿತ ರಾಜ್ಯಪಾಲರಿಂದ ಪ್ರಶಸ್ತಿ ಸ್ವೀಕರಿಸಿದ್ದು, ಈ ಪ್ರಶಸ್ತಿಯ ಶ್ರೇಯಸ್ಸು ತಮ್ಮೆಲ್ಲರಿಗೂ ಸಮರ್ಪಿತವಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ನ ಮುಖ್ಯ ಲೆಕ್ಕಾಧಿಕಾರಿ ಡಾ. ಆನಂದ ಸಾಹಬೀಬ, ಆಡಳಿತ ಶಾಖೆಯ ಸಹಾಯಕ ಕಾರ್ಯದರ್ಶಿ ಸುನೀಲ ನಾಯ್ಕ್, ಅಭಿವೃದ್ಧಿ ಶಾಖೆಯ ಸಹಾಯಕ ಕಾರ್ಯದರ್ಶಿ ಜಿ.ಆರ್. ಭಟ್, ಸಹಾಯಕ ಯೋಜನಾಧಿಕಾರಿ ಸುರೇಶ ನಾಯ್ಕ ಸೇರಿದಂತೆ ಜಿಲ್ಲಾ ಪಂಚಾಯತ್ನ ಎಲ್ಲ ಶಾಖೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top