ಕುಮಟಾ: ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಮೂಹ ಶಾಲಾ ಕಾಲೇಜುಗಳ ವತಿಯಿಂದ ಗಣರಾಜ್ಯೋತ್ಸವದ ಜಂಟಿ ಧ್ವಜಾರೋಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಅಧ್ಯಕ್ಷ ವಿಠ್ಠಲ್ ಆರ್. ನಾಯಕ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಧ್ವಜ ಸಂದೇಶವನ್ನು ಹಿರಿಯ ವಿಶ್ವಸ್ಥರಾದ ಡಿ.ಡಿ ಕಾಮತ್ ನೀಡಿ, ಸಂವಿಧಾನದ ಆಶಯಗಳನ್ನು ಎಲ್ಲರೂ ಪಾಲಿಸೋಣ.ಸ್ವಾರ್ಥ ಭ್ರಷ್ಟಾಚಾರ ದೇಶಕ್ಕೆ ಕಳಂಕ, ಅದಲ್ಲದೇ ಇದ್ದರೆ ಭಾರತ ವಿಶ್ವಗುರುವಾಗಿ ಇಪ್ಪತ್ತೈದು ವರ್ಷಗಳು ಸಂದು ಹೋಗುತ್ತಿತ್ತು. ಈಗ ಕಾಲ ಪಕ್ವವಾಗಿದೆ ರಾಮರಾಜ್ಯದ ಕನಸು ಸಾಕಾರಗೊಳ್ಳುವ ದಿನಗಳು ಆರಂಭವಾಗಿದೆ, ಪ್ರತಿಯೊಬ್ಬರು ಕರ್ತವ್ಯ ಮೆರೆಯೋಣ ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ವಿಶ್ವಸ್ಥರಾದ ರಮೇಶ ಪ್ರಭು, ಡಾಕ್ಟರ್ ವೆಂಕಟೇಶ ಶಾನಭಾಗ, ರಾಮಕೃಷ್ಣ ಗೋಳಿ, ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಆರ್.ಎಚ್.ದೇಶಭಂಡಾರಿ, ವಿಧಾತ್ರಿ ಸಂಸ್ಥಾಪಕ ಗುರುರಾಜ ಶೆಟ್ಟಿ, ಪ್ರಾಚಾರ್ಯರು, ಮುಖ್ಯಾಧ್ಯಾಪಕರು, ಸಿಬ್ಬಂದಿವರ್ಗದವರು ಹಾಗೂ ಪಾಲಕವರ್ಗದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಸ್ತತ ಪಡಿಸಿದ ವಿವಿಧ ರಾಷ್ಟ್ರಪುರುಷರ ಛದ್ಮ ವೇಷ, ರಾಷ್ಟ್ರ ಭಕ್ತಿಯ ನೃತ್ಯಗಳು ಗಮನ ಸೆಳೆದವು. ಹಲವು ದೇಶಭಕ್ತಿಯನ್ನು ಸಾರುವ ಸ್ಪರ್ಧೆಯನ್ನು ಏರ್ಪಡಿಸಿ, ಬಹುಮಾನ ನೀಡಲಾಯಿತು.