ಹೊನ್ನಾವರ: ಮಹಿಳೆಯರ ಅಭಿವೃದ್ದಿಗೆ ಗ್ರಾಮಾಭಿವೃದ್ದಿ ಯೋಜನೆಯ ಜೊತೆಗೆ ಕೇಂದ್ರ ಸರ್ಕಾರವು ಹಲವು ಸೌಲಭ್ಯ ನೀಡುತ್ತಾ ಬಂದಿದೆ ಎಂದು ಶಾಸಕ ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು.
ಮಾಡಗೇರಿಯ ಶ್ರೀ ರಾಮನಾಥ ಸಭಾಭವನದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಹಳದೀಪುರ ವಲಯ ಮಟ್ಟದ ಸಾಮೂಹಿಕ ಸತ್ಯನಾರಾಯಣ ಪೂಜೆ, ಮತ್ತು ಒಕ್ಕೂಟದ ಪದಗ್ರಹಣ ಉದ್ಘಾಟಿಸಿ ಮಾತನಾಡಿ,ಮಹಿಳೆಯರು ಸ್ವಾವಲಂಬನೆಯಿಂದ ಜೀವನ ನಡೆಸಲು ಗ್ರಾಮಾಭಿವೃದ್ದಿ ಯೋಜನೆಯು ಮಾದರಿಯಾಗಿದೆ. ಒಕ್ಕೂಟದ ಪದಗ್ರಹಣದ ಮೂಲಕ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಸಂಘಟನೆ ಬಲವರ್ಧನೆಗೆ ಶ್ರಮಿಸಬೇಕು. ಯೋಜನೆಯು ಮಹಿಳೆಯರಿಗೆ ನೀಡಿದ ಕೊಡುಗೆಯಂತೆ ಕೇಂದ್ರ ಸರ್ಕಾರವು ಮಹಿಳಾ ಮೀಸಲಾತಿ ಜಾರಿಗೊಳಿಸಿದೆ. ಮುಂದಿನ ದಿನದಲ್ಲಿ ಲೋಕಸಭೆಯಲ್ಲಿ 200ಕ್ಕೂ ಹೆಚ್ಚು, ವಿಧಾನಸಭೆಯಲ್ಲಿ 75ಕ್ಕೂ ಹೆಚ್ಚಿನ ಮಹಿಳೆಯರು ಜನಪ್ರತಿನಿಧಿಯಾಗಲಿದ್ದಾರೆ ಎಂದರು.
ಮಾಜಿ ಜಿ.ಪಂ.ಸದಸ್ಯರು ಕೆಡಿಸಿಸಿ ಬ್ಯಾಂಕ್ ನಿರ್ದೆಶಕರಾದ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ ಆರ್ಥಿಕ ಸಬಲೀಕರಣದ ಜೊತೆ, ಸಾಮಾಜಿಕ ಕ್ರಾಂತಿಯ ಮೂಲಕ ರಾಜ್ಯದೆಲ್ಲೆಡೆ ಡಾ. ಹೆಗ್ಗಡೆಯವರು ಮುಂಚೂಣಿಯಲ್ಲಿದ್ದಾರೆ. ಇದೆ ವೇಳೆ ಕೆಲವರು ವಿರೇಂದ್ರ ಹೆಗ್ಗಡೆಯವರ ಮೇಲೆ ಅಪಪ್ರಚಾರ ಮಾಡುವ ಕಾರ್ಯ ಮಾಡುತ್ತಿದ್ದಾರೆ ಇದನ್ನು ಎಂದೆಂದಿಗೂ ಸಹಿಸುವುದಿಲ್ಲ. ಅವರ ಕೊಡುಗೆ ಗಮನಿಸಿ ಕೇಂದ್ರದ ಮೋದಿ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ನೀಡುವ ಜೊತೆ ರಾಜ್ಯ ಸಭಾ ಸದಸ್ಯರನ್ನಾಗಿ ನೇಮಕ ಮಾಡಿದೆ ಎಂದು ಗ್ರಾಮಾಭಿವೃದ್ದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಯೋಜನೆಯ ಜಿಲ್ಲಾ ನಿರ್ದೆಶಕರಾದ ಬಾಬು ನಾಯ್ಕ ಮಾತನಾಡಿ ಗ್ರಾಮಾಭಿವೃದ್ದಿ ಯೋಜನೆಯು ಇಂದು ಗ್ರಾಮಗಳ ಅಭಿವೃದ್ದಿಗೆ ಶ್ರಮಿಸುತ್ತಿದ್ದು, ಪೂಜ್ಯರು ಹಲವು ಕಾರ್ಯಕ್ರಮ ಅನುಷ್ಟಾನಗೊಳಿಸಿದ್ದಾರೆ. ಜಾತಿ, ಧರ್ಮ ಪಕ್ಷ ನೋಡದೆ ಮಾನವ ಧರ್ಮದ ಮೂಲಕ ಯೋಜನೆಯು ನೆರವಾಗುತ್ತಿದೆ ಎಂದು ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಕವಲಕ್ಕಿಯ ಎಸ್.ಎಸ್.ಪಿ.ಯು. ಕಾಲೇಜು ಪ್ರಾಚಾರ್ಯರಾದ ಎಸ್.ಜಿ.ಭಟ್ ಧಾರ್ಮಿಕ ಉಪನ್ಯಾಸ ನೀಡಿ ನಾವೆಲ್ಲರೂ ಒಂದಾದರೆ ಅಭಿವೃದ್ದಿ ಸಾಧ್ಯ ಎಂದು ಗ್ರಾಮಾಭಿವೃದ್ದಿ ಯೋಜನೆ ತೋರಿಸಿದೆ. ಮನೆ ಮನೆಗೆ ಹಾಗೂ ಮನಮನಗಳಿಗೆ ಸ್ವಾತಂತ್ರ್ಯ ಬಂದಿರುದು ಗ್ರಾಮಾಭಿವೃದ್ದಿ ಯೋಜನೆ ಜಾರಿಯಾದಾಗ ಎಂದು ಯೋಜನೆಯ ಕಾರ್ಯಕ್ರಮ ಹಾಗೂ ಸತ್ಯನಾರಾಯಣ ಪೂಜೆಯ ಮಹತ್ವ ವಿವಿರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ಅಧ್ಯಕ್ಷರಾದ ಆರ್.ಎಮ್.ನಾಯ್ಕ ವಹಿಸಿದ್ದರು.
ನಿಕಟಪೂರ್ವ ಯೋಜನೆಯ ಪದಾಧಿಕಾರಿಗಳು ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು..
ವೇದಿಕೆಯಲ್ಲಿ ಜನಜಾಗೃತಿ ವೇದಿಕೆಯ ಸದಸ್ಯರು, ಪೂಜಾ ಸಮಿತಿ ಅಧ್ಯಕ್ಷರಾದ ರಾಮಚಂದ್ರ ನಾಯ್ಕ, ತಾಲೂಕ ಯೋಜನಾಧಿಕಾರಿ ವಾಸಂತಿ ಅಮಿನ್, ಸಮಾಜ ಸೇವಕರಾದ ಎಂ.ಕೆ.ಗೌಡ, ನಿವೃತ್ತ ಶಿಕ್ಷಕರಾದ ಜಿ.ಆರ್. ಭಟ್, ಉಪಸ್ಥಿತರಿದ್ದರು. ಯೋಜನಾಧಿಕಾರಿ ವಾಸಂತಿ ಅಮಿನ್ ಸ್ವಾಗತಿಸಿ, ವಲಯದ ಮೇಲ್ವಿಚಾರಕರಾದ ರಮ್ಯಾ ಎ.ಜಿ. ವರದಿ ವಾಚಿಸಿದರು. ಲೆಕ್ಕಪರಿಶೋದಕರಾದ ಗೋಪಾಲ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಪೂರ್ವ 101 ಜೋಡಿಗಳು ಕುಳಿತು ಸಾಮೂಹಿಕ ಸತ್ಯನಾರಾಯಣ ಪೂಜೆ ಮಾಡಿರುವುದು ವಿಶೇಷವಾಗಿತ್ತು. ಕಾರ್ಯಕ್ರಮದ ನಂತರ ಅನ್ನ ಪ್ರಸಾದ ವಿತರಣೆ ಮತ್ತು ಸ್ವಸಹಾಯ ಸಂಘದ ಸದಸ್ಯರಿಂದ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮ ಜರುಗಿತು.