ಶಿರಸಿ: ಕಳೆದ ಹಲವು ದಿನಗಳಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದ್ದ ಕಸದ ರಾಶಿಯನ್ನು ಸ್ವಚ್ಛಗೊಳಿಸುವಲ್ಲಿ ಕುಳವೆ ಗ್ರಾಮ ಪಂಚಾಯತ ಯಶಸ್ವಿಯಾಗಿದ್ದು, ನಗರಸಭೆಯ ಸಹಕಾರದೊಂದಿಗೆ ಸಂಪೂರ್ಣ ಕಸವನ್ನು ತೆಗೆದು ಸ್ವಚ್ಛಗೊಳಿಸಲಾಗಿದೆ.
ಕುಳವೆ ಗ್ರಾಪಂ ವ್ಯಾಪ್ತಿಯ ಪಡಂಬೈಲ್ ಕ್ರಾಸ್‌ನಲ್ಲಿ ನಗರ ಭಾಗದಿಂದ ಕಸವನ್ನು ಹಾಕುತ್ತಿದ್ದ ಕಾರಣ ದೊಡ್ಡ ರಾಶಿಯಾಗಿ ಗಬ್ಬು ನಾರುತ್ತಿತ್ತು. ಇದು ಸ್ಥಳೀಯರಿಗೆ, ಸಾರ್ವಜನಿಕರಿಗೆ, ವಾಹನ ಸವಾರರಿಗೂ ತೀವ್ರ ಕಿರಿಕಿರಿ ಉಂಟು ಮಾಡುತ್ತಿತ್ತು. ಈ ಬಗ್ಗೆ ಗ್ರಾಪಂನಿಂದ ಹಲವು ಕ್ರಮ ಕೈಗೊಂಡರೂ ಸಹ ಕಸದ ರಾಶಿ ಹಾಗೆಯೇ ಇತ್ತು. ಆದರೆ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಕುಳವೆ ಗ್ರಾಪಂ ಅಧ್ಯಕ್ಷೆ ರಂಜಿತಾ ಹೆಗಡೆ ಶಿರಸಿ ನಗರಸಭೆಗೆ ವಿನಂತಿಸಿ, ಅವರ ಸಹಕಾರದೊಂದಿಗೆ ಕಸವನ್ನು ಸಂಪೂರ್ಣ ಸ್ವಚ್ಛಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಕುಳವೆ ಪಂಚಾಯತದ ಮನವಿಯನ್ನು ಪರಿಗಣಿಸಿ ಪಡಂಬೈಲ್ ಸ್ಮಶಾನದ ಹತ್ತಿರವಿರುವ ಕಸದ ರಾಶಿಯನ್ನು ಶಿರಸಿ ನಗರಸಭೆಯವರು ಸ್ವಚ್ಛಗೊಳಿಸಿದ್ದು, ಪೌರ ಕಾರ್ಮಿಕರ ಕಾರ್ಯ ಶ್ಲಾಘನೀಯ ಎಂದರು.
ದಂಡದ ಕ್ರಮ:
ಈ ಜಾಗದಲ್ಲಿ ಮುಂದಿನ ದಿನಗಳಲ್ಲಿ ಕಸ ಹಾಕಿದಲ್ಲಿ ದೊಡ್ಡ ಪ್ರಮಾಣದ ದಂಡ ಹಾಕುವ ಕ್ರಮ ಕೈಗೊಳ್ಳಲಾಗಿದ್ದು, ಸ್ಥಳೀಯರಿಗೆ ಕಸ ಹಾಕುವವರ ಮೇಲೆ ನಿಗಾ ಇಡುವಂತೆ ತಿಳಿಸಿದ್ದು, ಇಲ್ಲಿ ಯಾರೇ ಕಸ ಹಾಕಿದರೂ ಪಂಚಾಯತದಿ0ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.