ಕುಮಟಾ: ಪಟ್ಟಣದ ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಡಾ.ಎಂ.ಡಿ.ಸುಭಾಶ್ಚಂದ್ರನ್ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಮಹಾವಿದ್ಯಾಲಯದ ಬಯೋಕ್ಲಬ್‌ನ ಅಡಿಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಮಾತನಾಡಿದ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಡಾ. ಎಂ.ಡಿ ಸುಭಾಶ್ಚಂದ್ರನ್ ಅವರು, ನಮ್ಮ ಸುತ್ತಮುತ್ತಲ ಪರಿಸರ ನಮ್ಮ ಬದುಕಿನ ಅವಿಭಾಜ್ಯ ಅಂಗ. ಬದುಕು ಪರಿಸರದ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಉತ್ತಮ ಪರಿಸರದ ಅಗತ್ಯತೆ ನಮಗಿದೆ ಎಂದರು. ಆಮ್ಲಜನಕ ಹಾಗೂ ಇಂಗಾಲದ ಡೈಆಕ್ಸೈಡ್ ಸಮಾನ ಪ್ರಮಾಣದಲ್ಲಿ ಇರುವುದನ್ನು ನಾವು ಗಮನಿಸುತ್ತೇವೆ. ಅವುಗಳಲ್ಲಿ ಅಸಮಾನತೆ ಆದರೆ ಬದುಕು ಕಷ್ಟಕ್ಕೆ ಸಿಲುಕುತ್ತದೆ. ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳುವಾಗ ನಾವು ಅವುಗಳ ಉಳಿವಿನ ಬಗ್ಗೆಯೂ ಚಿಂತಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಅವರು, ಬದುಕು ಅತ್ಯಂತ ಅಲ್ಪಾವಧಿಯದ್ದು, ಅದನ್ನು ಸುಂದರವಾಗಿಸುವ ನಿಟ್ಟಿನಲ್ಲಿ ನಾವುಗಳು ಪ್ರಯತ್ನಿಸಬೇಕು. ನಮ್ಮ ಮುಂದಿನ ತಲೆಮಾರುಗಳಿಗೆ ಉತ್ತಮ ಪರಿಸರ ನೀಡುವುದು ನಮ್ಮ ಕರ್ತವ್ಯವಾಗಬೇಕು ಎಂದು ಕರೆ ನೀಡಬೇಕು ಎಂದರು.
ನಿವೃತ್ತ ಉಪನ್ಯಾಸಕಿ ಗೀತಾ ನಾಯಕ ಮಾತನಾಡಿ ಪ್ಲಾಸ್ಟಿಕ್ ಬಳಕೆ ಅತ್ಯಂತ ಅಪಾಯಕಾರಿ. ನಾವು ಬಳಸುವ ಉಪ್ಪಿನಲ್ಲಿಯೂ ಪ್ಲಾಸ್ಟಿಕ್ ಸೇರುವ ಮಟ್ಟ ತಲುಪಿದೆ. ಪ್ರತೀ ವರ್ಷ 80 ಲಕ್ಷ ಟನ್ ಕಸ ಸಮುದ್ರ ಸೇರುತ್ತಿದೆ. ಇದು ಜಲಚರ ಪ್ರಾಣಿಗಳಿಗೂ ಅಪಾಯ ತಂದೊಡ್ಡುತ್ತದೆ. ಪ್ರತೀ ವರ್ಷ 50 ಸಾವಿರ ಕೋಟಿ ಟನ್ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ. ಅರಿಯದೇ ಮಾಡಿದ ತಪ್ಪನ್ನು ನಾವು ಸರಿಪಡಿಸಿಕೊಳ್ಳುವ ಕಾಲ ಇದು. ಇನ್ನು ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರಿನ ಪರಿಸರ ವಿಜ್ಞಾನ ಕೇಂದ್ರದಲ್ಲಿ ಸಂದರ್ಶಕ ವಿಜ್ಞಾನಿಯಾಗಿ, ರಾಜ್ಯ ಕಡಲ ತೀರ ವಲಯ ನಿರ್ವಹಣಾ ಪ್ರಾಧಿಕಾರದ ಸದಸ್ಯರು ಹಾಗೂ ಕರಾವಳಿ ಮತ್ತು ಪಶ್ಚಿಮ ಘಟ್ಟದ ಪರಿಸರದ ಸಂಶೋಧನೆಯಲ್ಲಿ ಹಲವಾರು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿ ಮುಖ್ಯಂತ್ರಿಗಳಿಂದ ರಾಜ್ಯ ಪರಿಸರ ಪ್ರಶಸ್ತಿಯನ್ನು ಡಾ. ಎಂ.ಡಿ ಸುಭಾಶ ಚಂದ್ರನ್ ಅವರು ಪಡೆದಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸೋಮಶೇಖರ ಗಾಂವ್ಕರ್, ಬಯೋ ಕ್ಲಬ್ ನ ಅಧ್ಯಕ್ಷೆ ಸುರೇಖಾ ನಾಯ್ಕ, ವೇದಿಕೆಯಲ್ಲಿದ್ದರು. ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ ಪಂಡಿತ ಹಾಗೂ ಇತರ ಉಪನ್ಯಾಸಕರು ಸಹಕರಿಸಿದರು. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.