ಸಿದ್ದಾಪುರ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು ಶಿಕ್ಷಕರ/ನೌಕರರ ಬೇಕು-ಬೇಡಿಕೆಗಳ ಈಡೇರಿಕೆಗಾಗಿ ರಾಷ್ಟ್ರ ಮಟ್ಟದ ಸಹಿ ಸಂಗ್ರಹಣಾ ಮಹಾ ಅಭಿಯಾನ ಹಮ್ಮಿಕೊಂಡಿದೆ. ಇದರ ಅಂಗವಾಗಿ ತಾಲೂಕಿನ ಕೋಲಶಿರ್ಸಿಯಲ್ಲಿ ಸಹಿ ಸಂಗ್ರಹಣಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸತಿಶ ಹೆಗಡೆ ಇತರ ಪದಾಧಿಕಾರಿಗಳು ಶಿಕ್ಷಕರ ಸಹಿ ಪಡೆದರು. ಅಖಿಲ ಭಾರತ ಶಿಕ್ಷಕರ ಫೆಡರೇಷನ್ ನವದೆಹಲಿ (AIPTF) ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು ಇವರ ನೇತೃತ್ವದಲ್ಲಿ ಶಿಕ್ಷಕರ/ನೌಕರರ ಬಹುದಿನಗಳ ಬೇಡಿಕೆಗಳಾದ ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸುವುದು. ಗುತ್ತಿಗೆ ಆಧಾರದ ಮೇಲೆ ಶಿಕ್ಷಕರ/ಅತಿಥಿ ಶಿಕ್ಷಕರ ನೇಮಕಾತಿಯ ಬದಲಾಗಿ ಖಾಯಂ ಶಿಕ್ಷಕರನ್ನು ನೇಮಿಸುವಂತೆ ಒತ್ತಾಯಿಸುವುದು.ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿರುವ ಶಿಕ್ಷಕರಿಗೆ ಭಾದಕವಾಗಿರುವ ಅಂಶಗಳನ್ನು ಕೈಬಿಡುವಂತೆ ಒತ್ತಾಯಿಸುವುದು.ಕೇಂದ್ರ ಮಾದರಿಯ ವೇತನವನ್ನು ಎಲ್ಲಾ ರಾಜ್ಯಗಳಿಗೆ ಏಕರೂಪವಾಗಿ ಜಾರಿಗೊಳಿಸುವಂತೆ ಒತ್ತಾಯಿಸುವುದು. ಶಿಕ್ಷಕರ ವರ್ಗಾವಣೆ, ಬಡ್ತಿ, ವೇತನ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸುವುದು.
ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ರಾಷ್ಟ್ರದ ಎಲ್ಲಾ ಶಿಕ್ಷಕರ ಸಹಿಯನ್ನು ಸಂಗ್ರಹಿಸುವುದನ್ನು 2022ರ ಆಗಸ್ಟ್ ತಿಂಗಳಲ್ಲಿ ಪೂರ್ಣಗೊಳಿಸುವುದು, ತದನಂತರ ಸೆಪ್ಟಂಬರ್ 5ರಂದು ಶಿಕ್ಷಕರ ದಿನಾಚರಣೆಯ ದಿನದಂದು ತಾಲ್ಲೂಕಿನಿಂದ ಸಂಗ್ರಹಿಸಿರುವ ಸಹಿ ಸಂಗ್ರಹಣಾ ಒತ್ತಾಯ ಪತ್ರವನ್ನು ಜಿಲ್ಲಾ ಕೇಂದ್ರದಲ್ಲಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಮೂಲಕ ದೇಶದ ರಾಷ್ಟ್ರಪತಿಗಳಿಗೆ ಹಾಗೂ ಪ್ರಧಾನಮಂತ್ರಿಗಳಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಸಹಿ ಸಂಗ್ರಹಣಾ ಪತ್ರಗಳನ್ನು ಸಲ್ಲಿಸುವ ಮೂಲಕ ಒತ್ತಾಯಿಸಲಾಗುವುದು ಎಂದು ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸತೀಶ ಹೆಗಡೆ ತಿಳಿಸಿದರು. ಈ ಸಂದರ್ಭಲ್ಲಿ ಸಂಘದ ಇತರ ಪದಾಧಿಕಾರಿಗಳು ಶಿಕ್ಷಕರ ಸಹಿ ಪಡೆದರು.