ಯಲ್ಲಾಪುರ: ವಿ.ಎಸ್. ಪಾಟೀಲರು ಸಮರ್ಥರು, ಅನುಭವಿಗಳು, ಅನೇಕ ವರ್ಷಗಳ ಹಿಂದೆ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಬಂದವರಾಗಿದ್ದರೂ, ಬಂದ ನಂತರ ಬಿಜೆಪಿ ಸಾಕಷ್ಟು ಅವಕಾಶ ನೀಡಿದೆ. ಮೂರು ಬಾರಿ ಅವರಿಗೆ ಶಾಸಕ ಸ್ಥಾನಕ್ಕೆ ಬಿಫಾರ್ಮ್ ನೀಡಲಾಗಿದೆ. ಒಂದು ಅವಧಿಗೆ ಅವರು ನಮ್ಮ ಶಾಸಕರು. ಸದ್ಯ ಸಂಪುಟ ಸ್ಥಾನಮಾನದ, ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಸ್ಥಾನವನ್ನೂ ನೀಡಲಾಗಿತ್ತು, ಸಂಘಟನೆಯಲ್ಲಿಯೂ ಅವರು ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಬಿಜೆಪಿ ಹಿರಿಯ ಕಾರ್ಯಕರ್ತ ರಾಮು ನಾಯ್ಕ ಹೇಳಿದರು.
ಅವರು ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಮಾತನಾಡಿ ಪ್ರಸಕ್ತ ಅವಧಿಯಲ್ಲಿ ಅವರು ಪಕ್ಷದ ಜಿಲ್ಲಾ ಅಧ್ಯಕ್ಷರ ಯಾದಿಯಲ್ಲಿ ಇದ್ದವರೂ ಆಗಿದ್ದರು. ಇಷ್ಟೆಲ್ಲ ಸ್ಥಾನ ಮಾನಗಳನ್ನು ನೀಡಿದ್ದರೂ, “ತಮಗೆ ಸೂಕ್ತ ಗೌರವಗಳು ಸಿಗುತ್ತಿರಲಿಲ್ಲ. ” ಅಂದರೆ ಅದರ ಅರ್ಥವೇನು? ಇಷ್ಟು ಅನುಭವಿಗಳು ಹಾಗೂ ಸ್ವಯಂಮಿಗಳು, ಚುನಾವಣಾ ಹೊಸ್ತಿಲಲ್ಲಿ ಹಠಾತ್ತಾಗಿ ಪಕ್ಷ ಬಿಡುವ ನಿರ್ಧಾರ ಹೇಗೆ ಕೈಗೊಂಡರೋ, ಯಾರ ಮೋಡಿಗೆ ಒಳಗಾದರೋ, ಗೊತ್ತಾಗುತ್ತಿಲ್ಲ. ಮೊದಲ ಹಂತದಲ್ಲಿಯೇ ಕೈಯಲ್ಲಿದ್ದ ನಿಗಮವೂ ತಪ್ಪಿಹೋಗಿದೆ. ಇದಕ್ಕೆ ಬೇರೆ ಯಾರೂ ಕಾರಣರಲ್ಲ, ಪಾಟೀಲರ ದುಡುಕಿನ ಹೇಳಿಕೆಗಳೇ ಕಾರಣ ಎಂದು ಹೇಳಿಕೆ ನೀಡಿದ್ದಾರೆ.