ಶಿರಸಿ: ಇಲ್ಲಿನ ಸ್ಥಳೀಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾಗಿರುವ ಲಯನ್ಸ್ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಯ ವಿದ್ಯಾರ್ಥಿಗಳು ಗ್ರಾಮೀಣ ಐ.ಟಿ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಭಾಗ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ದೇಶದ ಪ್ರತಿಷ್ಟಿತ ಉದ್ದಿಮೆಗಳಲ್ಲೊಂದಾದ ಟಾಟಾ ಕನ್ಸಲ್ಟನ್ಸಿ ಸರ್ವೀಸ್ ಕರ್ನಾಟಕ ಸರಕಾರದ ವಿಜ್ಞಾನ ತಂತ್ರಜ್ಞಾನ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಕ ಸಂವಹನ ತಂತ್ರಜ್ಞಾನ ಜಾಗೃತಿಯ ಕುರಿತಾಗಿ ನಡೆಸುವ ಈ ಗ್ರಾಮೀಣ ಐ.ಟಿ. ರಸಪ್ರಶ್ನೆ ಸ್ಪರ್ಧೆಯಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ಇಬ್ಬರೂ ವಿದ್ಯಾರ್ಥಿಗಳೂ ಶಿರಸಿ ಲಯನ್ಸ ಶಾಲಾ ವಿದ್ಯಾರ್ಥಿಗಳೇ ಆಗಿದ್ದಾರೆ.
9ನೇ ತರಗತಿಯಲ್ಲಿ ಓದುತ್ತಿರುವ ಜಯಂತ್ ನಾಗಪತಿ ಹೆಗಡೆ ಕಾಗೇರಿ ರಾಜ್ಯಮಟ್ಟಕ್ಕೆ ನೇರ ಆಯ್ಕೆ ಹಾಗೂ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಧೀರಜ್ ಮಹಾದೇವ ನಾಯ್ಕ ಇವರು ಕಾಯ್ದಿರಿಸಿದ ವಿಭಾಗದಿಂದ ಆಯ್ಕೆಯಾದ ವಿದ್ಯಾರ್ಥಿಗಳು.
ಇವರು ಬೆಳಗಾವಿ ವಿಭಾಗ ಮಟ್ಟದ ರೂರಲ್ ಐ.ಟಿ ಕ್ವಿಜ್ ನಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಈ ವಿದ್ಯಾರ್ಥಿಗಳ ಸಾಧನೆಗೆ ಕಾರಣರಾದ ಕಂಪ್ಯೂಟರ್ ಶಿಕ್ಷಕಿ ಚೈತ್ರಾ ಹೆಗಡೆ, ವಿದ್ಯಾರ್ಥಿಗಳ ಪಾಲಕರನ್ನು ಹಾಗೂ ಸಾಧಕ ವಿದ್ಯಾರ್ಥಿಗಳನ್ನು ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಮುಖ್ಯಾಧ್ಯಾಪಕರು ಹಾಗೂ ಶಿಕ್ಷಕ ವೃಂದ ಹಾರ್ದಿಕವಾಗಿ ಅಭಿನಂದಿಸಿದ್ದಾರೆ.