ಶಿರಸಿ: ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷ ತೊರೆಯುವ ಮಾತಿಲ್ಲಾ ಎಂದು ಜೆಡಿಎಸ್ ಮುಖಂಡ ಶಶಿಭೂಷಣ ಹೆಗಡೆ ಹೇಳಿದರು.
ಮಂಗಳವಾರ ಶಿರಸಿಯ ಹಾಪ್ ಕಾಮ್ಸ್ ಸಭಾಭವನದಲ್ಲಿ ಮಾಧ್ಯಮ ಗೋಷ್ಠಿ ನಡೆಸಿದ ಅವರು, ಉಹಾಪೂಹಾ ಮಾತಿಗೆ ಕಾರ್ಯಕರ್ತರು ತಲೆ ಕೊಡದೆ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು ಎಂದರು. ಜಿಲ್ಲೆಯಲ್ಲಿ ಪಕ್ಷ ಬಲವರ್ಧನೆಗೆ ಈಗಾಗಲೇ ತಾಲೂಕು ಸಮಿತಿಗಳನ್ನು ರಚಿಸಲಾಗುತ್ತಿದೆ. ಬರುವ ಚುನಾವಣೆ ಎದುರಿಸಲು ಹಲವು ಕಾರ್ಯಕ್ರಮ ಹಾಕಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ರಾಜ್ಯದ ಪ್ರಮುಖ ಮುಖಂಡರ ಜೊತೆ ಸಭೆ ನಡೆಸಿ ಮುಂಬರುವ ಚುನಾವಣೆಯಲ್ಲಿ ಹೆಚ್ ಡಿ. ಕುಮಾರಸ್ವಾಮಿ ಯವರು ಕ್ರಮಬದ್ದವಾದ ಹೆಜ್ಜೆ ಇಡಲಿದ್ದಾರೆ. ಪಂಚರತ್ನ ಯೊಜನೆಯ ಮೂಲಕ ರೈತ ಚೈತನ್ಯ, ಆರೋಗ್ಯ, ಶಿಕ್ಷಣ, ಉದ್ಯೋಗ, ಹಾಗೂ ವಸತಿ ಯೋಜನೆಯಡಿ ಜನರ ಮನೆಗೆ ತೆರಳುವ ಮೂಲಕ ಸಾಲದ ಸುಳಿಗೆ ರೈತ ಸಿಲುಕಬಾರದೆಂಬ ಧ್ಯೇಯೋದ್ದೇಶ ಇಟ್ಟುಕೊಂಡು ಹಲವಾರು ಯೋಜನೆಯೊಂದಿಗೆ ಜನರ ಬಳಿ ಹೊಗಲಿದ್ದಾರೆ ಎಂದು ತಿಳಿಸಿದರು.
ಜೆಡಿಎಸ್ ಜಿಲ್ಲಾ ಅಧ್ಯಕ್ಷ ಗಣಪಯ್ಯ ಗೌಡ ಮಾತನಾಡಿ, ಈಗಾಗಲೇ ತಾಲೂಕು ಸಮಿತಿ, ಹಾಗೂ ಪಕ್ಷದ ಪದಾಧಿಕಾರಿಗಳ ಆಯ್ಕೆ ಮಾಡಲಾಗುತ್ತಿದೆ. ನೂತನ ಮಹಿಳಾ ಸಮಿತಿ ಜಿಲ್ಲಾ ಅಧ್ಯಕ್ಷರನ್ನು ಸದ್ಯದಲ್ಲೇ ನೆಮಿಸಲಾಗುವುದು. ರೈತಮೋರ್ಚಾ ಸೇರಿದಂತೆ ಹಲವು ಸಮಿತಿ ರಚನೆಗೆ ಸಿದ್ಧತೆ ನಡೆದಿದೆ ಎಂದರು.
ಜಿಲ್ಲೆಯಲ್ಲಿ ಪಕ್ಷವನ್ನು ಮತ್ತೊಮ್ಮೆ ಕಟ್ಟವುದು ಸವಾಲಿನ ಕೆಲಸವಾಗಿದೆ. ಎಚ್.ಡಿ. ಕುಮಾರಸ್ವಾಮಿ, ಪ್ರಜ್ವಲ್ ರೆವಣ್ಣ ಮತ್ತು ನಿಖಿಲ್ ಕುಮಾರ್ ಸ್ವಾಮಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಪಕ್ಷ ಸಂಘಟನೆ ಮಾಡಲಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಉಪಾಧ್ಯಕ್ಷ ಜಿ.ಕೆ.ಪಟಗಾರ್, ಪ್ರಮುಖರಾದ ಆನಂದ ಗೌಡ, ಪಿ.ಟಿ. ನಾಯ್ಕ, ಎನ್ ಎಸ್.ಭಟ್, ಆರ್.ಜಿ ನಾಯ್ಕ, ರೇವತಿ, ಸೇರಿದಂತೆ ಇನ್ನಿತರರು ಹಾಜರಿದ್ದರು.