ಯಲ್ಲಾಪುರ: ತಾಲೂಕಿನ ಸಾತೊಡ್ಡಿ ಜಲಪಾತದ ಸುತ್ತಮುತ್ತ ಭಾರಿ ಮಳೆ ಸುರಿದ ಪರಿಣಾಮ ಜಲಪಾತದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಕೆಲವು ಪ್ರವಾಸಿಗರು ನೀರಿನ ನಡುವೆ ಸಿಲುಕಿ ಪರದಾಡಿದ ಘಟನೆ ನಡೆದಿದೆ. ನಂತರ ನೀರಿನ ಪ್ರಮಾಣ ಇಳಿಯುತ್ತಿದ್ದಂತೆ ಸ್ಥಳೀಯರ ನೆರವಿನೊಂದಿಗೆ ಅಲ್ಲಿಂದ ಪ್ರವಾಸಿಗರು ಸುರಕ್ಷಿತವಾಗಿ ಹೊರ ಬಂದಿದ್ದಾರೆ.
ಭಾನುವಾರ ಸಂಜೆ ಹುಬ್ಬಳ್ಳಿ ಕಡೆಯಿಂದ 10 ಪ್ರವಾಸಿಗರು ಜಲಪಾತ ನೋಡಲು ಬಂದು ನೀರು ಕಡಿಮೆ ಇದ್ದ ಕಾರಣಕ್ಕೆ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟಿ ಹೋಗಿದ್ದಾರೆ. ಪ್ರವಾಸಿಗರು ಬಂಡೆಗಲ್ಲುಗಳನ್ನು ದಾಟಿ ಇನ್ನೊಂದು ಬದಿಗೆ ಹೋದವರು ಮರಳುವ ಸಂದರ್ಭದಲ್ಲಿಯೇ ಜಲಪಾತದ ಅಕ್ಕಪಕ್ಕ ಭಾರಿ ಮಳೆ ಸುರಿದಿದೆ. ಜಲಪಾತದಲ್ಲಿ ಏಕಾಏಕಿ ನೀರಿನ ಪ್ರಮಾಣ ಹೆಚ್ಚಾದ್ದರಿಂದ ಬಂಡೆಗಲ್ಲುಗಳೆಲ್ಲಾ ಮುಳುಗಿ ಪ್ರವಾಸಿಗರು ದಾಟಿ ಇನ್ನೊಂದು ದಡ ಸೇರಲು ಪರದಾಡುವಂತಾಯಿತು. ಜಲಪಾತದ ಮೇಲ್ಭಾಗದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜಲಪಾತಕ್ಕೆ ಬಂದ ಪ್ರವಾಸಿಗರು ಸಿಲುಕಿಕೊಂಡಿದ್ದು, ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ.
ಪ್ರವಾಸಿಗರ ಚೀರಾಟ ಕೂಗಾಟವನ್ನು ನೋಡಿದ ಇನ್ನಿತರ ಪ್ರವಾಸಿಗರು ಅಲ್ಲಿಯ ಗ್ರಾಮ ಅರಣ್ಯ ಸಮಿತಿಗೆ ಸದಸ್ಯರಿಗೆ ತಿಳಿಸಿದ್ದಾರೆ. ವಿಷಯ ತಿಳಿದು ತಕ್ಷಣ ಕಾರ್ಯ ಪ್ರವೃತ್ತರಾದ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ನಾರಾಯಣ ಭಟ್ಟ ಕಂಚನಗದ್ದೆ, ಶಿವರಾಮ ಮಹಾಲೆ, ಶ್ರೀಧರ ಮಹಾಲೆ, ರಾಘವೇಂದ್ರ ಕುಂಬ್ರಾಳ ಹಾಗೂ ಇತರರು ಜಲಪಾತ ಪ್ರದೇಶಕ್ಕೆ ತೆರಳಿ ರಕ್ಷಣಾ ಕಾರ್ಯಕ್ಕೆ ಸಿದ್ಧವಾಗುತ್ತಿದ್ದಂತೆ ಮಳೆ ಕಡಿಮೆಯಾಗಿದೆ. ಜಲಪಾತದಲ್ಲಿ ನೀರಿನ ಹರಿವು ಕಮ್ಮಿಯಾಗುತ್ತಿದಂತೆ ಪ್ರವಾಸಿಗರು ಕಷ್ಟಪಟ್ಟು ಈಚೆ ದಡ ಸೇರಿದ್ದಾರೆ.