ನವರಾತ್ರಿಯ ಏಳನೇ ದಿನ ಕಾಳರಾತ್ರಿ ಆರಾಧನೆ: ನವದುರ್ಗೆಯರಲ್ಲಿ ಕಾಳ ರಾತ್ರಿಯದ್ದು ಏಳನೇ ರೂಪ. ಕಾಳರಾತ್ರಿಯದ್ದು ಭಯಂಕರ ರೂಪ ಈ ದೇವಿ ದುಷ್ಟರ ವಿನಾಶ ಮಾಡುವವಳು, ಕಾಳ ರಾತ್ರಿಯ ಸ್ವರೂಪ ಹೀಗಿದೆ.. ಈ ದೇವಿ ನೋಡಲು ಅತ್ಯಂತ ಭಯಂಕರ, ವಿಶೇಷ ಎಂದರೆ ಕಾಳರಾತ್ರಿ ಕತ್ತೆಯ ಮೇಲೆ ಸವಾರಿ ಮಾಡುತ್ತಾಳೆ. ತಲೆಕೂದಲನ್ನು ಹರಡಿಕೊಂಡಿದ್ದಾಳೆ ನೋಡಲು ಭಯಂಕರವಾಗಿ ಕಾಣಿಸುತ್ತಾಳೆ. ಇವಳ ಕೊರಳಲ್ಲಿ ಧರಿಸಿರುವ ಹಾರ ಮಿಂಚಿನಂತೆ ಹೊಳೆಯುತ್ತದೆ. ಇವಳಿಗೆ ಮೂರು ಕಣ್ಣುಗಳಿವೆ. ಇವಳು ಉಸಿರಾಡಿದರೆ ಅಗ್ನಿ ಜ್ವಾಲೆ ಹೊರಹೊಮ್ಮುತ್ತದೆ. ಇವಳಿಗೆ ನಾಲ್ಕು ಭುಜಗಳು, ಬಲಭಾಗದ ಎರಡು ಕೈ ವರಮುದ್ರೆ, ಅಭಯ ಮುದ್ರೆಯಲ್ಲಿದೆ ಎಡಗೈಯಲ್ಲಿ ಖಡ್ಗ ಮತ್ತು ಕಬ್ಬಿಣದ ಅಸ್ತ್ರವಿದೆ. ಕಾಳರಾತ್ರಿ ದೇವಿ ದುಷ್ಟರಿಗೆ ಮೃತ್ಯು ದೇವತೆಯಾದ ರಕ್ಷಾ ಕವಚ ಈಕೆ ತನ್ನವರನ್ನು ರಕ್ಷಣೆ ಮಾಡಿ ಪಾಪವನ್ನು ನಾಶ ಮಾಡುತ್ತಾಳೆ. ನವರಾತ್ರಿಯಲ್ಲಿ ಇವಳ ಉಪಾಸನೆ ಅತ್ಯಂತ ಫಲದಾಯಕವಾಗಿವೆ. ಇವಳ ಆರಾಧನೆಯಿಂದ ಸಮಸ್ತ ಪಾಪಗಳೂ ನಾಶವಾಗುತ್ತವೆ. ದುಃಖಗಳು ದೂರವಾಗುತ್ತವೆ. ಇವಳ ಪೂಜೆಯಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಕಾಳರಾತ್ರಿಯ ಆರಾಧನೆಯಿಂದ ದುಷ್ಟ ಶಕ್ತಿಗಳ ಕಾಟ ದೂರವಾಗುತ್ತದೆ, ಸಕಲ ದುಃಖಗಳು ದೂರವಾಗುತ್ತವೆ. ನವರಾತ್ರಿಯ ಏಳನೇ ದಿನ ಸಾಧಕರಿಗೆ ಹೆಚ್ಚು ಮಹತ್ವದ ದಿನ, ಈ ದಿನ ಕಾಳರಾತ್ರಿಯ ಉಪಾಸನೆ ಮಾಡುವ ಸಾಧಕನಿಗೆ ಶಕ್ತಿಯು ಸಹಸ್ರಾನ ಚಕ್ರದಲ್ಲಿ ನೆಲೆಗೊಳ್ಳುತ್ತದೆ. ಅಂದು ಬ್ರಹ್ಮಾಂಡದ ಎಲ್ಲಾ ಸಿದ್ಧಿಗಳ ಬಾಗಿಲು ತೆರೆದುಕೊಳ್ಳುತ್ತದೆ.