ಕುಮಟಾ: ಶ್ರೀ ರಾಮಚಂದ್ರ ಪತ್ತಿನ ಸಹಕಾರಿ ಸಂಘ ನಿಯಮಿತ ಕುಮಟಾ ಇದರ 2020-21 ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆ ಇತ್ತೀಚೆಗೆ ನಡೆಯಿತು.
ಸಂಘದ ಅಧ್ಯಕ್ಷ ಡಾ. ವಿ.ಜಿ. ಶೆಟ್ಟಿ ಮಾತನಾಡಿ ಯಶಸ್ವಿ 20 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಸಂಘವು ಕೋವಿಡ್ ವಿಷಮ ಪರಿಸ್ಥಿತಿ ನಡುವೆಯೂ ಶೇ. 96.50 ಸಾಲ ವಸೂಲಾತಿಯೊಂದಿಗೆ 39.18 ಲಕ್ಷ ಲಾಭ ಗಳಿಸಿದೆ ಎಂದರು.
ಆಡಳಿತ ಮಂಡಳಿ ಸದಸ್ಯರ ನಿಸ್ವಾರ್ಥ ಸೇವೆ, ಸಿಬ್ಬಂದಿಗಳು ಹಾಗೂ ಪಿಗ್ಮಿ ಠೇವು ಸಂಗ್ರಾಹಕರ ಕಠಿಣ ಪರಿಶ್ರಮದ ಜತೆಗೆ ಸದಸ್ಯ ಗ್ರಾಹಕರ ಸಹಕಾರವೇ ಅಭಿವೃದ್ದಿಗೆ ಮುಖ್ಯ ಕಾರಣ ಎಂದು ತಿಳಿಸಿದರು. ಸಂಘವು ಮಾರ್ಚ ಅಂತ್ಯಕ್ಕೆ 19.69 ಕೋಟಿ ದುಡಿಯುವ ಬಂಡವಾಳ, 17.48 ಕೋಟಿ ಸಾಲ ವಿತರಣೆ ಮಾಡಿದೆ. ಈ ವರ್ಷವೂ ಸಹ ಶೇ.12 ಡಿವಿಡೆಂಡ್ ಘೋಷಿಸಿದೆ ಎಂದು ಮಾಹಿತಿ ನೀಡಿದರು.
ಕೋವಿಡ್ 1 ನೇ ಅಲೆಯಲ್ಲಿ ಸಂಘವು 16 ಆಶಾ ಕಾರ್ಯಕರ್ತೆಯರಿಗೆ ತಲಾ 3000 ರೂ, 8 ಪಿಗ್ಮಿ ಸಂಗ್ರಾಹಕರಿಗೆ ತಲಾ 3000 ರಿಂದ 5000 ರೂ. ನೀಡಿರುವುದಾಗಿ ತಿಳಿಸಿದರು. ಕೋವಿಡ್ 2 ನೇ ಅಲೆಯಲ್ಲಿ 75 ಬಡ ಕುಟುಂಬಗಳಿಗೆ ತಲಾ 1000 ರೂ. ದಿನಸಿ ಕಿಟ್ ನೀಡಲಾಗಿದೆ ಎಂದರು.
ಸಂಘದ ನಿರ್ದೇಶಕ ಈ ವೇಳೆ ಸಂಘದ ಉಪಾಧ್ಯಕ್ಷ ಶ್ರೀಧರ ಕೆ. ಶೆಟ್ಟಿ, ಮುಖ್ಯ ಕಾರ್ಯನಿರ್ವಾಹಕ ಶ್ರೀಧರ ಆನಂದ ಶೆಟ್ಟಿ, ನಿರ್ದೇಶಕರಾದ ನಾರಾಯಣ ಉಡದಂಗಿ, ಗಿರೀಶ ಶೆಟ್ಟಿ, ಉಪೇಂದ್ರ ಭಟ್ಟ, ಗಣಪತಿ ಎಸ್. ಶೆಟ್ಟಿ, ಸತೀಶ ಶೆಟ್ಟಿ, ಪದ್ಮಾ ಶೆಟ್ಟಿ ಹಾಗೂ ಲತಾ ವೆರ್ಣೇಕರ್, ಎನ್.ಎಸ್. ಹೆಗಡೆ, ಸದಸ್ಯರಾದ ದಾಮೋದರ ಕೆ. ಶೆಟ್ಟಿ, ಆನಂದ ಕೆಕ್ಕಾರ, ಅನುಪಕುಮಾರ ಅಬ್ಬಿಮನೆ, ಬುಡನ್ ಶೇಖ, ರಾಮಚಂದ್ರ ಡಿ. ಹೆಗಡೆ, ಉಮೇಶ ಶೆಟ್ಟಿ, ಕೃಷ್ಣ ನಾಯ್ಕ ಇತರರು ಇದ್ದರು.