ಶಿರಸಿ: ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವವರನ್ನು, ಮೇಲ್ಸ್ತರದಲ್ಲಿರುವವರನ್ನು ಗೌರವಿಸುವ ಕಾರ್ಯ ಸಾಮಾನ್ಯ. ಆದರೆ ನಗರಸಭೆ ಕರ್ಮಚಾರಿಗಳು, ತ್ಯಾಜ್ಯಸಾಗಣೆ ವಾಹನ ಚಾಲಕರು, ರುದ್ರಭೂಮಿ ಸಹಾಯಕರು ಮುಂತಾದವರ ಸೇವೆಯನ್ನು ಗುರುತಿಸಿ ಗೌರವಿಸುವ ಶಿರಸಿ ರೋಟರಿಯ ಕಾರ್ಯ ನಿಜಕ್ಕೂ ಸ್ತುತ್ಯಾರ್ಹ. ಈ ಮಾದರಿಯನ್ನು ನಾವು ಲಯನ್ಸ್ ಮೂಲಕವೂ ಅನುಸರಿಸುವ ಪ್ರಯತ್ನ ಮಾಡುತ್ತೇವೆ ಎಂಬುದಾಗಿ ಶಿರಸಿ ಲಯನ್ಸ್ ಅಧ್ಯಕ್ಷ ಲ. ಉದಯ ಸ್ವಾದಿ ತಿಳಿಸಿದ್ದಾರೆ.
ಶಿರಸಿ ರೋಟರಿ ಕ್ಲಬ್ ಆಶ್ರಯದಲ್ಲಿ ಏರ್ಪಾಟಾದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು, ಜನಸೇವಕರನ್ನು ಗೌರವಿಸಿ ಮಾತನಾಡಿದ ಅವರು ಶಿರಸಿಯಲ್ಲಿನ ರೋಟರಿ ಮತ್ತು ಲಯನ್ಸ್ ಸಂಸ್ಥೆಗಳ ಬಾಂಧವ್ಯವನ್ನು ಶ್ಲಾಘಿಸಿ, ಇತ್ತೀಚೆಗೆ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಯಶಸ್ವಿಯಾದ “ಮಧುಮೇಹವನ್ನು ಮಣಿಸಿ” ಆಂದೋಲನದ ಬಗ್ಗೆಯೂ ಹೆಮ್ಮೆಯ ಮಾತುಗಳನ್ನಾಡಿದರು.
ಸುಂದರ ಶಿರಸಿಯನ್ನು ಸ್ವಚ್ಛವಾಗಿಡುವ ಕರ್ಮಚಾರಿಗಳಾದ ನಾರಾಯಣ ಪಂಜು ಹರಿಜನ, ಅನಿಲ ಭೋಜಾ ಹರಿಜನ, ಗಂಗಾಧರ ಲಮಾಣಿ, ಜ್ಯೋತಿ ಚಂದ್ರು ಹರಿಜನ, ಚಾಲಕರಾದ ಇಮ್ತಿಯಾಝ ಮೂದಿ ಅಂತೆಯೇ ವಿದ್ಯಾನಗರ ರುದ್ರಭೂಮಿ ಸದ್ಗತಿ ವಿಭಾಗದ ಗಣಪತಿ ಮಡಿವಾಳ ಇವರುಗಳನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಸೆ. 29ರಂದು ಅಪೂರ್ವ ಯಶಸ್ಸು ಕಂಡ “ಮಧುಮೇಹ ಮಣಿಸಿ” ಆಂದೋಲನದಲ್ಲಿ ಪಾಲ್ಗೊಂಡ ರೋಟರಿ, ಲಯನ್ಸ್, ಐ.ಎಂ.ಎ. ಇನ್ನರ್ ವ್ಹೀಲ್ ಮತ್ತು ಆರ್ಟ್ ಆಫ್ ಲಿವಿಂಗ್ ಸಂಸ್ಥೆಗಳ ಸ್ವಯಂಸೇವಕರನ್ನು ಗೌರವಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಅಧ್ಯಕ್ಷ ಪಾಂಡುರಂಗ ಪೈ ಸ್ವಾಗತಿಸಿದರು. ಸಂಚಾಲಕ ಶ್ರೀಧರ ಹೆಗಡೆ ಅತಿಥಿಗಳನ್ನು ಪರಿಚಯಿಸಿದರು. ಕಾ.ನಿ. ಕಾರ್ಯದರ್ಶಿ ಡಾ. ಸುಮನ್ ದಿನೇಶ ಹೆಗಡೆ “ವೈಷ್ಣವ ಜನತೊ….” ಹಾಡಿದರು. ರೋಟರಿ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ ಪತ್ರವ್ಯವಹಾರ ಸಾದರಪಡಿಸಿದರು. ಇನ್ನರ್ವ್ಹೀಲ್ ಕಾರ್ಯದರ್ಶಿ ರೇಖಾ ಅನಂತ ವಂದಿಸಿದರು. ವಿಜಯಶ್ರೀ ಮತ್ತು ರಮೇಶ ಹೆಗಡೆ ದಂಪತಿ ನಿರ್ವಹಿಸಿದರು.