• first
    second
    third
    previous arrow
    next arrow
  • ಎಲ್.ಎಸ್.ಎಂ.ಪಿ ಸೊಸೈಟಿ ಒಡೆದು ನಂದೊಳ್ಳಿ, ಚಂದಗುಳಿ ಸಹಕಾರಿ ಸಂಘ ಸ್ಥಾಪನೆಗೆ ಪ್ರಮುಖರ ಆರೋಪ !

    300x250 AD

    ಯಲ್ಲಾಪುರ: ಯಲ್ಲಾಪುರ ಪ್ರಾಥಮಿಕ ಪತ್ತಿನ ವ್ಯವಸಾಯ ಸೇವಾ ಸಹಕಾರಿ ಸಂಘವನ್ನು (ಎಲ್.ಎಸ್.ಎಂ.ಪಿ) ರಾಜಕೀಯ ದುರುದ್ದೇಶದಿಂದ ಒಡೆಯಲಾಗುತ್ತಿದೆ ಎಂದು ಸಂಘದ ಪ್ರಮುಖರು ಆರೋಪಿಸಿರುವುದನ್ನು ನಿಯೋಜಿತ ಚಂದಗುಳಿ ಹಾಗೂ ನಂದೊಳ್ಳಿ ಸಹಕಾರಿ ಸಂಘಗಳ ಮುಖ್ಯ ಪ್ರವರ್ತಕರಾದ ಎಸ್.ಕೆ.ಭಾಗ್ವತ ಗಾಣಗದ್ದೆ ಹಾಗೂ ಟಿ.ವಿ.ಭಾಗ್ವತ ಅಲ್ಲಗಳೆದಿದ್ದಾರೆ.


    ಅವರು ಈ ಕುರಿತು ಪತ್ರಿಕಾ ಹೇಳಿಕೆ ನೀಡಿ, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಸಹಕಾರಿ ಸಂಘ ತೆರೆಯಲು ರಾಜ್ಯ ಸರ್ಕಾರ 2017-18 ನೇ ಸಾಲಿನಲ್ಲಿ ಆದೇಶಿಸಿದ್ದು, ಅದರ ಪ್ರಕಾರ ನಂದೊಳ್ಳಿ, ಚಂದಗುಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಒಂದೊಂದು ಸಂಘ ತೆರೆಯಲು ಮುಂದಾಗಿದ್ದೇವೆ. ಸದ್ಯ ಎರಡೂ ಗ್ರಾ.ಪಂಗೆ ಸಂಬಂಧಿಸಿದಂತೆ ಯಲ್ಲಾಪುರ ಪಟ್ಟಣದಲ್ಲಿ ಯಲ್ಲಾಪುರ ಪ್ರಾಥಮಿಕ ಪತ್ತಿನ ವ್ಯವಸಾಯ ಸೇವಾ ಸಹಕಾರಿ ಸಂಘ ಇದ್ದು, ಸದಸ್ಯರಿಗೆ ಸೊಸೈಟಿಯ ಕೆಲಸವಿದ್ದಲ್ಲಿ 15 ಕಿಮೀ ದೂರದ ಪಟ್ಟಣಕ್ಕೆ ಹೋಗಬೇಕಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು ನಮ್ಮ ಊರಿನಲ್ಲೇ ಸಂಘ ಆರಂಭವಾಗಬೇಕೆಂಬ ಉದ್ದೇಶದಿಂದ 2018 ರ ಡಿಸೆಂಬರ್ ತಿಂಗಳಲ್ಲಿ ಕೃಷಿಕರ ಸಭೆ ನಡೆಸಿ, ಚಂದಗುಳಿಯಲ್ಲಿ ಸಿದ್ಧಿವಿನಾಯಕ ಪ್ರಾಥಮಿಕ ಪತ್ತಿನ ಸಹಕಾರಿ ಸಂಘ, ನಂದೊಳ್ಳಿಯಲ್ಲಿ ನಂದೊಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಆರಂಭಿಸಲು ನಿರ್ಣಯಿಸಿ, ಶಿರಸಿಯ ಸಹಾಯಕ ನಿಬಂಧಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅವರು ಎರಡೂ ಸಂಘಗಳಿಗೆ ನೋಂದಣಿ ಪೂರ್ವ ಶೇರು ಸಂಗ್ರಹಣೆಗೆ ಆದೇಶಿಸಿದ್ದು, ಅದರಂತೆ ನಮ್ಮ ಭಾಗದ ಕೃಷಿಕರಿಂದ ಶೇರು ಹಣ ಸಂಗ್ರಹಿಸಿ ಕೆಡಿಸಿಸಿ ಬ್ಯಾಂಕಿನ ಯಲ್ಲಾಪುರ ಶಾಖೆಯಲ್ಲಿ ಠೇವಣಿ ಇಟ್ಟಿದ್ದೇವೆ ಎಂದು ವಿವರಿಸಿದರು.


    2019 ರ ಫೆಬ್ರುವರಿಯಲ್ಲಿ ಈ ಪ್ರಕ್ರಿಯೆಗೆ ಧಾರವಾಡದ ಉಚ್ಛನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಮತ್ತೆ ವಿಚಾರಣೆ ನಡೆದು ನ್ಯಾಯಾಲಯದ ನಿರ್ದೇಶನದಂತೆ ಸಂಘವನ್ನು ನೋಂದಣಿ ಮಾಡಲು 2021 ರ ಸೆ.18 ರಂದು ಕಾರವಾರದ ಸಹಕಾರಿ ಸಂಘಗಳ ಉಪನಿಬಂಧಕರು ನಿರ್ದೇಶಿಸಿದ್ದಾರೆ. ಈ ಆದೇಶದ ವಿರುದ್ಧ ಎಲ್.ಎಸ್.ಎಂ.ಪಿ ಸೊಸೈಟಿ ಪ್ರಮುಖರು ಉಚ್ಛನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಅದು ತಿರಸ್ಕೃತಗೊಂಡಿದೆ. ನಂತರ ಶಿರಸಿಯ ಸಹಾಯಕ ನಿಬಂಧಕರು ಸೆ.21 ರಂದು ನಮ್ಮ ಸಂಘಗಳಿಗೆ ಮಾನ್ಯತೆ ನೀಡಿ ನೋಂದಣಿ ಪ್ರಮಾಣಪತ್ರವನ್ನೂ ನೀಡಿದ್ದಾರೆ.

    300x250 AD


    ಮೂರು ವರ್ಷಗಳ ಕಾಲ ಸಹಕಾರಿ ಕಾನೂನಿನ ಅಡಿಯಲ್ಲಿ ವಿಚಾರಣೆ ನಡೆದು ನಮ್ಮ ಸಂಘಗಳು ನೋಂದಣಿಯಾಗಿವೆ. ಅನೇಕ ಸದಸ್ಯರ ಒತ್ತಾಸೆಯ ಮೇರೆಗೆ ಈ ಸಂಘ ಆರಂಭಿಸಲಾಗಿದೆ. ಸದಸ್ಯರು ಶೇರು ಬಂಡವಾಳವನ್ನೂ ಹೂಡಿದ್ದಾರೆ. ಇದರಲ್ಲಿ ಯಾವ ರಾಜಕೀಯ ದುರುದ್ದೇಶವೂ ಇಲ್ಲ. ಹೀಗಿರುವಾಗ ಅನಗತ್ಯ ಆರೋಪ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.


    2012 ನೇ ಸಾಲಿನಲ್ಲಿ ತಾಲೂಕಿನ ಆನಗೋಡ ಸೇವಾ ಸಹಕಾರಿ ಸಂಘವನ್ನು ಒಡೆದು ದೇಹಳ್ಳಿ, ಕಣ್ಣಿಗೇರಿಗಳಲ್ಲಿ ಸಂಘಗಳು ಆರಂಭವಾಗಿವೆ. 2013 ರಲ್ಲಿ ಕಿರವತ್ತಿ ಸಹಕಾರಿ ಸಂಘವನ್ನು ಒಡೆದು ಮದನೂರಿನಲ್ಲಿ ಸಂಘ ಆರಂಭವಾಗಿದೆ. ಆಗ ಸಂಘಗಳನ್ನು ಒಡೆದಾಗ ಸ್ವಾಗತಿಸಿ, ಅಭಿನಂದಿಸಿದವರೇ ಈಗ ರಾಜಕೀಯ ದುರುದ್ದೇಶ ಎಂದು ಆರೋಪಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

    Share This
    300x250 AD
    300x250 AD
    300x250 AD
    Back to top