ಶಿರಸಿ: ಪರಿಶಿಷ್ಠ ಜಾತಿಯಲ್ಲಿಯೇ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕರ್ನಾಟಕ ಅಲ್ಪಸಂಖ್ಯಾತ ಚೆನ್ನಯ್ಯ ಜಾತಿ ಸಮಗ್ರ ಅಭಿವೃದ್ಧಿಗೆ ಚನ್ನಯ್ಯ ಸಮಾಜ ಅಭಿವೃದ್ಧಿ ನಿಗಮ ಸ್ಥಾಪಿಸಿ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು ಎಂದು ಅಖಿಲ ಕರ್ನಾಟಕ ಚೆನ್ನಯ್ಯ (ಬಲಗೈ) ಸಮಾಜ ಅಭಿವೃದ್ಧಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಬಸವರಾಜ ದೊಡ್ಮನಿ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ಮನವಿ ಸಲ್ಲಿಸಿದರು.
ನಗರಕ್ಕೆ ಆಗಮಿಸಿದ ಸಚಿವ ಪೂಜಾರಿ ಅವರನ್ನು ಭೇಟಿ ಮಾಡಿದ ಬಸವರಾಜ್ ದೊಡ್ಮನಿ, ಚನ್ನಯ್ಯ ಜಾತಿಯ ಸಮೀಕ್ಷೆ ನಡೆಸಿ ಸಾಮಾಜಿಕ ಸ್ಥಿತಿಗತಿ, ಜನಜೀವನ, ಉದ್ಯೋಗ ಇತ್ಯಾದಿ ವಿವರಗಳ ಸಮಗ್ರ ಅಧ್ಯಯನ ನಡೆಸಬೇಕು. ಶಾಲಾ ದಾಖಲಾತಿಗಳಲ್ಲಿ ಆದಿ ಕರ್ನಾಟಕ, ಮಾದರ, ತಳವಾರ ಇತ್ಯಾದಿ ವೃತ್ತಿ ಸೂಚಕ ಪದಗಳು ಬಳಕೆಯಲ್ಲಿದ್ದು, ಈ ಹೆಸರುಗಳ ಮುಂದೆ ಚನ್ನಯ್ಯ ಪದ ಸೇರಿಸಲು ಸುತ್ತೋಲೆ ಹೊರಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ವಿವಿಧೆಡೆ ಹಂಚಿಹೋಗಿರುವ ಚನ್ನಯ್ಯ ಸಮಾಜದ ಜನರನ್ನು ಗುರುತಿಸುವ ಕಾರ್ಯ ಆಗಬೇಕು. ಜಾತಿ, ಸಂಸ್ಕೃತಿ, ಆಚಾರಣೆ, ಸಂಪ್ರದಾಯ ಹೋಲುಚಂತವರನ್ನು ಗುರುತಿಸಿ ಚನ್ನಯ್ಯ ಜಾತಿಪತ್ರ ನೀಡಬೇಕು. ಬೆಂಗಳೂರಿನಲ್ಲಿ ರಾಜ್ಯ ಚನ್ನಯ್ಯ ಸಮಾಜ ಭವನ ನಿರ್ಮಿಸಲು ಜಮೀನು ಮಂಜೂರಿ ಮಾಡಿ, 5 ಕೋಟಿ ಅನುದಾನ ನೀಡಬೇಕು. ರಾಜ್ಯ ಚನ್ನಯ್ಯ ಸಮಾಜದ ಮಹಾ ಸಮಾವೇಶ ನಡೆಸಬೇಕು. ಪ್ರತ್ಯೇಕ ಒಳಮೀಸಲಾತಿ ನೀಡಬೇಕು. ರಾಜಕೀಯ ಪ್ರಾತಿನಿಧ್ಯ ನೀಡಬೇಕು. ಕುವೆಂಪು ವಿವಿ ಯಲ್ಲಿ ಚನ್ಯಯ್ಯ ಸಮಾಜದ ಅಧ್ಯಯನ ಪೀಠ ಸ್ಥಾಪಿಸಬೇಕು. ಚನ್ನಯ್ಯ ಜಾತಿ ಜನರಿರುವ ತಾಲೂಕಿನಲ್ಲಿ ಸಮಾಜ ಭವನ ನಿರ್ಮಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ಈ ವೇಳೆ ಸಮಿತಿ ಗೌರವಾಧ್ಯಕ್ಷ ಎಚ್.ಕೆ. ಬಸವತಪ್ಪ ಜಡೆ, ಪ್ರಧಾನ ಕಾರ್ಯದರ್ಶಿ ಎ.ಕೆ. ನಾಗರಾಜ, ಖಚಾಂಚಿ ಹೊಳೆಲಿಗ ಬಿ.ಎಚ್, ಸಂಘಟನಾ ಸಂಚಾಲಕ ಎಚ್. ಕೆ.ಶಿವಾನಂದ, ಪ್ರಮುಖರಾದ ಹಾಲೇಶ, ರೇವಪ್ಪಿತರರು ಇದ್ದರು.