ಶಿರಸಿ: ರಾಷ್ಟ್ರೀಯ ಪಕ್ಷಗಳು ಕನ್ನಡಿಗರ ಮೇಲೆ ಹಿಂದಿ ಹೇರಿಕೆಗೆ ಮುಂದಾಗಿರುವುದನ್ನು ಕದಂಬ ಸೈನ್ಯ ಖಂಡಿಸಿದೆ. ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಕದಂಬ ಸೈನ್ಯದ ರಾಜ್ಯ ಅಧ್ಯಕ್ಷ ರಮೇಶ ಬೇಕ್ರೀ ಹಿಂದಿ ಹೇರಿಕೆಗೆ ವಿರೋಧ ವ್ಯಕ್ತಪಡಿಸಿದರು.
ಹಿಂದಿ ಹೇರಿಕೆಯನ್ನು ಖಂಡಿಸಲಾಗುವುದು. ಯಾವುದೇ ಕಾರಣಕ್ಕೂ ಕನ್ನಡ ಹೊರತಾಗಿ ರಾಜದಲ್ಲಿ ಅನ್ಯ ಭಾಷೆಗೆ ಮಾನ್ಯತೆ ನೀಡಬಾರದು. ಈ ಕುರಿತು ರಾಜ್ಯ ಸರ್ಕಾರ ಒತ್ತಡಕ್ಕೆ ಮಣಿಯದೆ ಕನ್ನಡಿಗರ ಪರವಾಗಿ ನಿಲ್ಲಬೇಕು ಎಂದು ಆಗ್ರಹಿಸಿದರು.
ಕನ್ನಡ ನೆಲದ ಸರ್ಕಾರಿ ಅಕಾಡೆಮಿಗಳು ಕನ್ನಡ, ಸಂಸ್ಕೃತಿ ಬೆಳಿಸುತ್ತಿಲ್ಲ ಎಂದು ಬೇಸರಿಸಿದ ಅವರು, ಸಂವಿಧಾನದಲ್ಲಿರುವ ಭಾಷಾ ವಿಧಿ ಕಲಂ 343-351 ರವರೆಗೆ ತಿದ್ದುಪಡಿ ತರಬೇಕು ಎಂದರು.
ಕನ್ನಡ ನೆಲದಲ್ಲಿ ಬದುಕು ಸಾಗಿಸುತ್ತಿರುವ ಹಿಂದಿ, ತಮಿಳು, ಉರ್ದು, ತೆಲುಗು, ಇಂಗ್ಲೀಷ್, ರಾಜಸ್ತಾನಿ, ಮರಾಠಿ ಮತ್ತಿತರ ಭಾಷಿಕರು ಸಾರ್ವತ್ರಿಕವಾಗಿ ಕನ್ನಡ ಮಾತನಾಡಬೇಕು ಎಂದು ಅಭಿಪ್ರಾಯಿಸಿದರು.
ಕರ್ನಾಟಕದ ಎಲ್ಲಾ ಸರ್ಕಾರಿ ನೌಕರರ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕೆಂಬ ಕಾಯಿದೆ ಕಡ್ಡಾಯವಾಗಿ ಜಾರಿಗೆ ತರಬೇಕು. ಸಚಿವಾಲಯ ಅಧಿಕಾರಿಗಳಿಂದ ಕನ್ನಡಕ್ಕೆ ಕುತ್ತು ಬರುತ್ತಿದೆ ರಾಜ್ಯ ಸರ್ಕಾರ ಜಾಗೃತಿ ವಹಿಸಬೇಕು ಎಂದು ತಿಳಿಸಿದರು.
ಕನ್ನಡ ನೆಲದ ಕೇಂದ್ರ ಸರ್ಕಾರದ ಕಚೇರಿಗಳು, ಬ್ಯಾಂಕುಗಳು ಕನ್ನಡಿಗರಿಗೆ ಉದ್ಯೋಗ ನೀಡಬೇಕು. ಪರಭಾಷಿಕರಿಗಲ್ಲ. ಕನ್ನಡ ಬಳಸಬೇಕು ಹಾಗೂ ವ್ಯವಹರಿಸಬೇಕು. ಸರ್ಕಾರಿ ವಾಹನಗಳಿಗೆ ಮಾತ್ರ ಕನ್ನಡ ಮತ್ತು ಆಂಗ್ಲ ಭಾಷೆಯ ಅಂಕಿಗಳಿವೆ. ಖಾಸಗಿ ವಾಹನಗಳಿಗೂ ಕೂಡ ಕಡ್ಡಾಯವಾಗಿ ಕನ್ನಡ ಮತ್ತು ಆಂಗ್ಲ ಭಾಷೆಯ ಅಂಕಿಗಳನ್ನು ಬಳಸುವಂತೆ ನಿಯಮ ಜಾರಿಗೆ ತರಬೇಕು ಎಂದರು.
ಸರ್ಕಾರಿ ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಬಳಕೆಯು ವಿಸ್ತಾರವಾಗುವಂತೆ ಮಾಡಬೇಕು. ಕನ್ನಡಿಗರ ಉದ್ಯೋಗದಾತೆ ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನು ಕಾಯಿದೆಯಾಗಿ ಜಾರಿಗೆ ತರಬೇಕು ಎಂದು ಒತ್ತಡ ಹೇರಿದರು.
ಸುದ್ದಿಗೋಷ್ಠಿಯಲ್ಲಿ ಮೈಸೂರು ಜಿಲ್ಲಾಧ್ಯಕ್ಷ ಎ.ನಾಗೇಂದ್ರ, ಜಾತ್ಯಾತೀತ ಮಹಿಳಾ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷೆ ಕನ್ನಡ ರತ್ನ ರಾಜ್ಯ ಸಂಚಾಲಕಿ ಶಾಂತಮ್ಮ ಮತ್ತು ಕದಂಬ ಸೈನ್ಯದ ಪದಾಧಿಕಾರಿಗಳು ಇದ್ದರು