• Slide
    Slide
    Slide
    previous arrow
    next arrow
  • ಕಲೆ, ಸಾಹಿತ್ಯ, ಸಂಸ್ಕೃತಿಗಳ ಸಂಗಮವಾಗಿದ್ದ ಜೋಗಿಮನೆ; ಆರು ದಶಕಗಳ ಬಳಿಕ ಮತ್ತೆ ಆಯೋಜನೆಗೊಂಡ ಯಕ್ಷಗಾನ ತಾಳಮದ್ದಲೆ

    300x250 AD

    ಜೋಗಿಮನೆಯವರ ಬಾಳಗಾರ ಮೇಳ. ಬಹುಷ: ಈ ಹೆಸರು ಈಗಿನ ತರುವಾಯದವರಿಗೆ ಬಹಳ ಅಪರೂಪದ ಅಥವಾ ಕೇಳದೆಯೇ ಇರುವ ಹೆಸರಿನಂತೆಯೇ ಕಾಣಬಹುದು.

    ಮೇಳ ಅಂದರೆ ಯಕ್ಷಗಾನ ಮೇಳ. ಈ ಬಾಳಗಾರ ಮೇಳವನ್ನು ಜೋಗಿಮನೆ ಮನೆತನದ ಸುಬ್ಬಯ್ಯ ಕೃಷ್ಣ ಹೆಗಡೆ ಮತ್ತು ರಾಮಕೃಷ್ಣ ನಾರಾಯಣ ಹೆಗಡೆ, ಇವರು ಈಗಿನಂತೆ ವಾಹನ, ವಿದ್ಯುತ್, ಮೊಬೈಲ್, ಟಿವಿ ಸಂಪರ್ಕಗಳು ಇಲ್ಲದ ಸಂದರ್ಭದಲ್ಲಿ, ಯಳ್ಳೆಣ್ಣೆಯ ಹಿಲಾಲು, ದೊಡ್ಡ ದೊಡ್ಡ ಚಿಮಣಿ ದೀಪಗಳನ್ನು ಕೈಯಲ್ಲಿ ಹಿಡಿದು ನಾಡಿನಾದ್ಯಂತ ಚಕ್ಕಡಿ ಗಾಡಿಯಲ್ಲಿ, ಬಹುತೇಕ ಸಲ ಕಾಲ್ನಡಿಗೆಯಲ್ಲಿ ಸಂಚರಿಸಿ ಯಕ್ಷಗಾನ ಬಯಲಾಟಗಳನ್ನು ಪ್ರದರ್ಶಿಸಿ ಈ ಕಲೆಯನ್ನು ಸಮೃದ್ಧಗೊಳಿಸಿದ್ದರು. ತಮ್ಮ ಜೀವನವನ್ನೇ ಯಕ್ಷಗಾನಕ್ಕೆ ಮುಡುಪಾಗಿಟ್ಟಿದ್ದರು. ಕನ್ನಡ ನಾಡು-ನುಡಿ ಭಾಷೆ, ಸಾಹಿತ್ಯಕ್ಕೆ ಅಮೋಘ ಕೊಡುಗೆ ನೀಡಿದ್ದರು.


    ಈ ಮೇಳ ಸುಮಾರು 150 ವರ್ಷಗಳಷ್ಟು ಸುಧೀರ್ಘ ಕಾಲ ಯಕ್ಷರಂಗದ ಸೇವೆಯನ್ನು ಮಾಡಿತ್ತು ಎಂದರೆ ಹುಬ್ಬೇರಿಸುವವರ ಸಂಖ್ಯೆಯೇ ಜಾಸ್ತಿಯಾದೀತು. ಈ ಮನೆತನದ ರಾಮಕೃಷ್ಣ ನಾರಾಯಣ ಹೆಗಡೆ ಅವರು ಪ್ರತಿ ವರ್ಷ ಅನಂತ ಚತುದರ್ಶಿ ವೃತ ಆಚರಣೆ ಮಾಡುತ್ತಿದ್ದರು. ಅಂದು ರಾತ್ರಿ ಬೆಳತನಕ ತಮ್ಮ ಮನೆಯ ಜಗಲಿಯಲ್ಲಿ ಯಕ್ಷಗಾನ-ತಾಳಮದ್ದಲೆಗಳನ್ನು ಆಯೋಜಿಸುತ್ತಿದ್ದರು. ಸುತ್ತಮುತ್ತಲಿನ ಯಕ್ಷ ದಿಗ್ಗಜರು ಅದರಲ್ಲಿ ತಾದಾತ್ಮ್ಯತೆ ಹೊಂದಿರುತ್ತಿದ್ದರು. 60 ವರ್ಷಗಳ ಹಿಂದೆ ರಾಮಕೃಷ್ಣ ಹೆಗಡೆ ಅವರ ಕಾಲವಾದ ನಂತರ ಈ ಪ್ರದರ್ಶನವೂ ನೇಪತ್ಯಕ್ಕೆ ಸೇರಿತ್ತು. ಅದಾದ ಬಳಿಕ ಈಗ ಮತ್ತೆ ಅದೇ ಜೋಗಿಮನೆಯಲ್ಲಿ ಯಕ್ಷಗಾನ ತಾಳಮದ್ದಲೆ ಪ್ರಸಂಗವನ್ನು ಏರ್ಪಡಿಸುತ್ತಿರುವುದು ಯಕ್ಷಾಸಕ್ತರಲ್ಲಿ ಸಂತಸವನ್ನುಂಟುಮಾಡಿದೆ. ಅದಕ್ಕೆ ಕಾರಣ ಜೋಗಿಮನೆಯ ವಂಶಸ್ಥರಾದ ಅನಂತ ರಾಮಕೃಷ್ಣ ಹೆಗಡೆ ಹಾಗೂ ಇತಿಹಾಸ ಪ್ರಾಧ್ಯಾಪಕರಾದ ಡಾ.ಬಾಲಕೃಷ್ಣ ಮಂಜುನಾಥ ಹೆಗಡೆ ಅವರು. ಆರು ದಶಕಗಳ ಬಳಿಕ ಈಗ ಮತ್ತೆ ಇದೇ ವಿಜಯದಶಮಿಯಂದು ಜೋಗಿಮನೆಯಲ್ಲಿ ಸಂಜೆ ಜೋಗಿಮನೆ ಬಳಗದ ವತಿಯಿಂದ ನುರಿತ ಕಲಾವಿದರಿಂದ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ಏರ್ಪಾಟು ಮಾಡಿದ್ದು.


    ಐತಿಹಾಸಿಕ ಮಹತ್ವ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಅಜ್ಜೀಬಳ ಸಮೀಪ ಇರುವ ಒಂದು ಚಿಕ್ಕ ಗ್ರಾಮ ಬಾಳಗಾರದಲ್ಲಿರುವ ಒಂದು ಪುರಾತನ ಮನೆತನವೇ ಜೋಗಿಮನೆ ಮನೆತನ. ಇದಕ್ಕೆ ತನ್ನದೇ ಆದ ಸುಧೀರ್ಘ ಇತಿಹಾಸವಿದೆ. ಕಳೆದ ನೂರಾರು ವರ್ಷಗಳ ಹಿಂದಿನಿಂದಲೂ ಈ ಮನೆತನದವರು ಕಲೆ, ಸಾಹಿತ್ಯ, ಶಿಕ್ಷಣ, ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತ ಬಂದಿದ್ದು ಮುಂಚೂಣಿಯಲ್ಲಿದ್ದ ಮನೆತನ. ಇವಿಷ್ಟೇ ಅಲ್ಲ. ಈ ಮನೆತನಕ್ಕೆ ಬಾಳಗಾರ ಮತ್ತು ಸುತ್ತ ಮುತ್ತಲಿನ ಕೆಲ ಗ್ರಾಮದ ಪೋಲಿಸ್ ಪಟೇಲಿಕೆ ಇದ್ದರೂ ಅದನ್ನು ಧಿಕ್ಕರಿಸಿ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ದಬ್ಬಾಳಿಕೆ ವಿರುದ್ಧ ತೊಡೆ ತಟ್ಟಿ ನಿಂತಿದ್ದ ಮನೆತನ ಇದಾಗಿತ್ತು. ಅಂದರೆ ಈ ಮನೆತನದ ಅಂದಿನವರ ವ್ಯಕ್ತಿತ್ವ ಅದೆಷ್ಟು ಉದಾತ್ತವಾಗಿತ್ತು ಮತ್ತು ದೇಶ ಭಕ್ತಿಯ ಪರಾಕಾಷ್ಟೆಯನ್ನು ಹೊಂದಿತ್ತು ಎಂಬುದು ವೇದ್ಯವಾಗುತ್ತದೆ.


    ಶಾಲೆ ಆರಂಭವಾದ್ದು ಇಲ್ಲೇ: 1950ರಲ್ಲಿ ಇದೇ ಜೋಗಿಮನೆ ಹೆಬ್ಬಾಗಿಲ ಹೇಡಿಗೆ ಮೇಲೆಯೇ ಜಾಗ ಕೊಟ್ಟು ಬಾಳಗಾರ ಶಾಲಾರಂಭಕ್ಕೆ ಸಹಕರಿಸಿದ ಹೆಗ್ಗಳಿಗೆ ಈ ಮನೆತನದ್ದು. ಆರಂಭದಲ್ಲಿ ಅನೇಕ ವರ್ಷಗಳ ಕಾಲ ಇಲ್ಲಿಯೇ ಶಾಲೆ ನಡೆದಿದ್ದು ಈಗ ಇತಿಹಾಸ. ಎಲ್ಲ ರೋಗಕ್ಕೂ ಉಚಿತ ಔಷಧಿ ನೀಡುತ್ತಿದ್ದು ’ಜೋಗಿಮನೆ ಮದ್ದು’ ಎಂದೇ ಪ್ರಸಿದ್ಧವಾಗಿತ್ತು.


    ಕರ ನಿರಾಕರಣೆ ಚಳವಳಿಯಲ್ಲಿ ಜೋಗಿಮನೆ: 1923ರಲ್ಲಿ ಮಹಾತ್ಮಾ ಗಾಂಧೀಜಿ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಕರ ನಿರಾಕರಣೆ ಚಳವಳಿಯಲ್ಲಿ ಬ್ರಿಟಿಷರ ವಿರುದ್ಧ ನಡೆದ ಹೋರಾಟದಲ್ಲಿ ’ಪೋಲಿಸ್ ಪಟೇಲ್‌ಕೆ ನಿರಾಕರಿಸಿ, ಭಾಗವಹಿಸಿ ತಮ್ಮ ಮನೆ-ಮಠ, ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡ ಕುಟುಂಬ ಈ ಜೋಗಿಮನೆ. ಈ ಮನೆತನದ ಆಸ್ತಿ-ಪಾಸ್ತಿಯನ್ನು ಹರಾಜು ಹಾಕಲಾಯಿತು. 60 ಎಕರೆ ಭತ್ತದ ಗದ್ದೆಯನ್ನು ಕಳಕೊಂಡ ಮನೆತನ ಇದಾಗಿದೆ. 1923ರಿಂದ ಮುಂದಿನ 10 ವರ್ಷ ಈ ಸಹೋದರರು ಮಾಡಿದ ಕೆಲಸ ಎಂದರೆ ಬರೇ ಯಕ್ಷಗಾನ ಪರದರ್ಶನವೊಂದೇ. ಅದೂ ಮನೆಯಲ್ಲಿದ್ದ ಬಂಗಾರದ ಆಭರಣಗಳನ್ನು ಮಾರಾಟ ಮಾಡಿ!


    ಮನೆಯ ಜಗಲಿಯೇ ತರಬೇತಿ ಶಾಲೆ: ಜೋಗಿಮನೆ ರಾಮಕೃಷ್ಣ ಹೆಗಡೆ ಎಂದರೆ ಅದೊಂದು ಜ್ಞಾನ ಭಂಡಾರದ ಖನಿಯಾತ್ತು. ರುಕ್ಮಾಂಗದ ಚರಿತ್ರೆಯೂ ಸೇರಿ 34 ಯಕ್ಷಗಾನ ಪುಸ್ತಕಗಳನ್ನು ಹೊಂದಿದ್ದ ಅಪರೂಪದ ಯಕ್ಷಪ್ರೇಮಿ ಯಾಗಿದ್ದರು ಅವರು. ಅತ್ಯಂತ ಕಠಿಣ ಎಂದೇ ಭಾವಿಸಲಾಗಿದ್ದ ಹಾರ್ಮೋನಿಯಂನ್ನು ನುಡಿಸುತ್ತ ಮಂತ್ರಪುಷ್ಪ ಹೇಳುತ್ತಿದ್ದ ಇವರನ್ನು ಬಿಟ್ಟರೆ ಬೇರೆ ಯಾರೂ ಈ ರೀತಿ ಇದ್ದಿರಲಿಲ್ಲ. ಜೋಗಿಮನೆಯ ಹೆಬ್ಬಾಗಿಲ ಹೇಡಿಗೆ, ಜಗುಲಿಯೇ ಆ ಗ್ರಾಮದ ಸುತ್ತಮುತ್ತಲಿನವರಿಗೆ ಯಕ್ಷಗಾನದ ತರಬೇತಿ, ಕಲಾವಿದರ ತಯಾರಿ, ಮೇಳದ ತಯಾರಿಯ ಕೇಂದ್ರವಾಗಿತ್ತು. ಇದಕ್ಕೆಲ್ಲ ಸೂತ್ರದಾರರು ಆ ಮನೆತನದ ಸುಬ್ಬಯ್ಯ ಕೃಷ್ಣ ಹೆಗಡೆ ಮತ್ತು ರಾಮಕೃಷ್ಣ ನಾರಾಯಣ ಹೆಗಡೆ ಅವರೇ ಆಗಿದ್ದರು. ಆಗಂತೂ ಮಳೆಗಾಲದ ಅರ್ಭಟ ಅಂದರೆ ಹೇಳತೀರದು. ಮಳೆಗಾಲದ ನಾಲ್ಕೂ ತಿಂಗಳೂ ದಿನದ 24 ಗಂಟೆಯೂ ಮಳೆ ಬೀಳುತ್ತಿದ್ದ ಕಾಲ ಅದಾಗಿತ್ತು. ಆ ನಾಲ್ಕು ತಿಂಗಳ ಕಾಲ ಸ್ಥಳೀಯರಿಗೆ, ಸುತ್ತಮುತ್ತಲಿನವರಿಗೆ ಈ ಮನೆ ಯಕ್ಷ ತರಬೇತಿಯ ಕೇಂದ್ರವಾಗಿತ್ತು. ಅನ್ನ ನೀರು ಬಿಟ್ಟು ಇವರು ಯಕ್ಷಗಾನದ ತಾಲೀಮು ಮಾಡುತ್ತಿದ್ದರು. ಇವರ ಹೆಜ್ಜೆ ಕುಣಿತಕ್ಕೆ ಮಣ್ಣಿನ ನೆಲವೆಲ್ಲ ಕಿತ್ತು ಮನೆತುಂಬಾ ಧೂಳು ರಾಶಿ ತುಂಬಿಕೊಳ್ಳುತ್ತಿತ್ತು. ಅದ್ಯಾವುದೂ ಅವರಿಗೆ ಲೆಕ್ಕಕ್ಕಿಲ್ಲವಾಗಿತ್ತು. ಒಂದು ಮೇಳಕ್ಕೆ ಬೇಕಾದ ಎಲ್ಲ ಪರಿಕರಗಳೂ ಜೋಗಿಮನೆಯ ಬಾಳಗಾರ ಮೇಳದಲ್ಲಿದ್ದವು.

    300x250 AD


    ಜೋಗಿಮನೆಯ ಸುಬ್ಬಯ್ಯ ಹೆಗಡೆ ದೈತ್ಯ ಪಾತ್ರಗಳಾದ ಕೌರವ, ದುಷ್ಟಬುದ್ದಿ, ಮೊದಲಾದ ಪಾತ್ರಗಳಲ್ಲಿ ಪ್ರಸಿದ್ಧಿ ಪಡೆದರೆ, ರಾಮಕೃಷ್ಣ ನಾರಾಯಣ ಹೆಗಡೆ ಅವರು ಕೃಷ್ಣ, ಸ್ತ್ರೀ ವೇಶಗಳಲ್ಲಿ ಪ್ರಸಿದ್ಧಿ ಪಡೆದಿದ್ದರು. ಸಾವಿರ ರಂಗಸ್ಥಳಗಳಲ್ಲಿ ವೇಷ ಧರಿಸಿ ಕುಣಿದಿದ್ದಲ್ಲದೆ ಅರ್ಥಧಾರಿಕೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇವರ ಎಲ್ಲ ರಂಗಾಸಕ್ತಿಗೆ ಬೆನ್ನೆಲುಬಾಗಿ ನಿಂತವರು ಪತ್ನಿ ಜಾಹ್ನವಿ ರಾಮಕೃಷ್ಣ ಹೆಗಡೆ ಅವರು. ಜೋಗಿಮನೆ ಜಾನಕ್ಕ ಎಂದೇ ಖ್ಯಾತರಾಗಿದ್ದರು.


    ಅಂದಿನ ಕಾಲದಲ್ಲಿ ಯಕ್ಷಲೋಕದಲ್ಲಿ ವರಕವಿ ಎಂದೇ ಖ್ಯಾತರಾಗಿದ್ದ ನಿಂತುಕೊಂಡೇ ಭಾಗವತಿಕೆ ಮಾಡುತ್ತಿದ್ದ ಅಡಕಳ್ಳಿಯ ಸುಬ್ರಾಯ ಭಾಗವತರು ಜೋಗಿಮನೆಯಯಲ್ಲಿ ಭಾಗವತಿಕೆ ಮಾಡಿದ್ದಕ್ಕೆ ಲೆಕ್ಕವೇಇಲ್ಲ. ಪ್ರತ್ಯೇಕ ವೇದಿಕೆಗಳಲ್ಲಿ ರಾಮಾಯಣ ಮತ್ತು ದೇವಿ ಮಹಾತ್ಮೆ ಪ್ರಸಂಗಗಳಿಗೆ ಏಕಕಾಲದಲ್ಲಿ ಯಾವುದೇ ’ಪಟ್ಟಿಯ’ ಸಹಾಯವಿಲ್ಲದೆ ಭಾವತಿಕೆ ಮಾಡುತ್ತಿದ್ದುದು ಅವರ ವಿಶೇಷತೆಯಾಗಿತ್ತು.
    ಜೋಗಿಮನೆಯಲ್ಲಿ ಭಾಗವತಿಕೆ ಮಾಡಿದವರಲ್ಲಿ ಜಾಗನಹಳ್ಳಿಯ ದೊಡ್ಡ ಸುಬ್ರಾಯ ಭಾಗವತರೂ, ಸಣ್ಣ ಸುಬ್ರಾಯ ಭಾಗವತರೂ ಪ್ರಮುಖರು. ಪುಡಿ ಗಣಪತಿ ಹೆಗಡೆ, ಕೃಷ್ಣ ಹೆಗಡೆ ಮೊದಲಾದವರೂ ಪ್ರಸಿದ್ಧ ಅರ್ಥಧಾರಿಗಳಾಗಿದ್ದು ಜಾಗನಹಳ್ಳಿ ಕೂಟ. ಆ ದಿಗ್ಗಜರೆಲ್ಲರೂ ಜೋಗಿಮನೆಯ ತಾಳಮದ್ದಲೆಯಲ್ಲಿ ಭಾಗವಹಿಸುತ್ತಿದ್ದರು. ಇದರಲ್ಲಿ ಕೆರೆಕೈ ಕೃಷ್ಣ ಭಟ್ಟರು, ಕಬ್ನಳ್ಳಿ ಚಂದ್ರಶೇಖರ ಹೆಗಡೆ, ಗೋಳಗೋಡ ವಿಶ್ವೇಶ್ವರ ಹೆಗಡೆ ಪ್ರಸಿದ್ಧ ಅರ್ಥಧಾರಿಗಳಾಗಿದ್ದರು. ಸತತ 14 ವ ರ್ಷಗಳ ಕಾಲ ಜೋಗಿಮನೆಯಲ್ಲಿ ನಡೆಯುತ್ತಿದ್ದ ಅನಂತ ಚತುದರ್ಶಿ ದಿವಸ ರಾತ್ರಿ ಬೆಳಗಿನ ತನಕ ನಡೆಯುತ್ತಿದ್ದ ತಾಳಮದ್ದಲೆಯಲ್ಲಿ ಅರ್ಥಧಾರಿಗಳಾಗಿರುತ್ತಿದ್ದರು. ಭಾಗವತಿಕೆ, ಮದ್ದಲೆ, ಚಂಡೆ ವಾದಕರು ಅರ್ಥಧಾರಿಗಳಿಂದ ಜಾಗ ತುಂಬಿ ತುಳುಕುತ್ತಿದ್ದುದು ವಿಶೇಷವಾಗಿತ್ತು.


    ಪ್ರಸಿದ್ಧ ಅರ್ಥಧಾರಿಗಳು: ಜೋಗಿಕೇರಿಯ ದೊಡ್ಡಣ್ಣ ಎಂದೇ ಮನೆಮಾತಾಗಿದ್ದ ವೆಂಕಟರಮಣ ಹೆಗಡೆ ಅವರು ಕೇವಲ ಅರ್ಥಧಾರಿಗಳಾಗಿರದೆ ವೇಶಧಾರಿಗಳು ಆಗಿದ್ದರು. ರಾಮಯ್ಯ ಕೃಷ್ಣಪ್ಪ ಹೆಗಡೆ ಅವರೂ ವೇಷ ಹಾಗೂ ಅರ್ಥಧಾರಿಗಳಾಗಿದ್ದು ಜೋಗಿಮನೆಯ ವೇದಿಕೆಯ ಅನೇಕ ತಾಳಮದ್ದಲೆಗಳಲ್ಲಿ ಭಾಗವಹಿಸಿದ್ದರು.ಹೊರಾಲೆ ದತ್ತಣ್ಣ, ದತ್ತಾತ್ರೇಯ ಹೆಗಡೆ ಅವರೂ ಜೋಗಿಮನೆಯಲ್ಲಿ ಅರ್ಥ ಹೇಳಿದವರೇ. ಪ್ರಸಿದ್ಧ ಯಕ್ಷಗಾನ ಕಲಾವಿದರಾಗಿದ್ದ ಕೆರೆಮನೆ ವೆಂಕಟಾಚಲ ಭಟ್ಟರದ್ದು ಯಕ್ಷರಂಗ ಪ್ರವೇಶವಾಗಿದ್ದು ಜೋಗಿಮನೆಯಲ್ಲೇ ಎನ್ನುವುದೂ ಇನ್ನೊಂದು ವಿಶೇಷ. ತಮ್ಮ 13ನೇ ವಯಸ್ಸಿನಲ್ಲಿ ಅಡಕಳ್ಳಿಯ ಭಾಗವರು ಎವರನ್ನು ರಂಗಕ್ಕೆ ತಂದು ಓಂಕಾರ ಹಾಕಿದ್ದು ಜೋಗಿಮನೆಯ ಜಗಲಿಯಲ್ಲೇ.


    ಕೈಯಳಿಕೆಮನೆ ಸೀತಣ್ಣ ಅರ್ಥಧಾರಿಗಳಾಗಿದ್ದು ಜೋಗಿಮನೆಯ ರಾಮಕೃಷ್ಣ ಹೆಗಡೆ ಅವರ ಪುತ್ರ ವಿಶ್ವನಾಥ ಹೆಗಡೆ ಅವರೂ ಆರಂಭದಲ್ಲಿ ಕೆಲಕಾಲ ಭಾಗವತಿಕೆ ಮಾಡಿದ್ದರು. ರಾಮಕೃಷ್ಣ ಹೆಗಡೆ ಅವರ ಹಿರಿಯ ಪುತ್ರ ಮಂಜುನಾಥ ಹೆಗಡೆ, ಕೋಡಶಿಂಗೆ ದೇವಸ್ಥಾನದಲ್ಲಿ ಅಡಕಳ್ಳಿ ಗೊಂಬೆ ಸುಬ್ಬಣ್ಣ, ಬಂಗಾರೇಶ್ವರ ಹೆಗಡೆ ಜೊತೆ ಸೇರಿ ವೇಷ ಧರಿಸಿ ಪಾತ್ರ ಮಾಡಿದ್ದರು.
    ಪ್ರಸಿದ್ಧ ಸಾಹಿತಿ, ಜ್ಯೋತಿಷಿ, ರಂಗ ತಜ್ಞರಾಗಿದ್ದ ಶೀಗೇಹಳ್ಳಿಯ ವಿ.ಟಿ.ಹೆಗಡೆ, ಕಲ್ಮನೆಯ ವೇ.ಭ್ರ.ವೆಂಕಟರಂ ಭಟ್ಟ, ಮುತ್ತಮುರ್ಡಿನ ನರಸಿಂಹ, ಗಣಪತಿ ಹೆಗಡೆ ಸಹೋದರರು, ಮುತ್ತಮುರ್ಡು ಎಮ್.ಎಸ್.ಹೆಗಡೆ ಅವರ ತಂದೆ ಸುಬ್ರಾಯ ಶಂಕರ ಹೆಗಡೆ, ದೊಡ್ಡಮನೆ ಮಾಧವ ಹೆಗಡೆ, ತಡಗುಣಿಯ ಸತ್ಯನಾರಾಯಣ ಭಟ್ರು, ಗೋಪಾಲ ಭಟ್ರು, ಸೊಂಡ್ಳಬೈಲಿನ ನಾರಾಯಣ ವೆಂಕಪ್ಪ ಹೆಗಡೆ, ಕಲಗದ್ದೆಯ ವೆಂಕಟಾಚಲ ಹೆಗಡೆ, ಹೆಗ್ಗರ್ಸಿಮನೆಯ ವಿದ್ವಾನ್ ಮಧುಕೇಶ್ವರ ಭಟ್ರು ಮೊದಲಾದವರು ಈ ಜೋಗಿಮನೆಯ ಬಾಳಗಾರ ಮೇಳದಲ್ಲಿ ಪಾತ್ರಧಾರಿಗಳಾಗಿ ಮಿಂಚಿದ್ದರು.


    ಸತತ 30 ವರ್ಷಗಳ ಕಾಲ ಶಿರಸಿಯ ಶ್ರೀ ಮಾರಿಕಾಂಬಾ ಜಾತ್ರೆಯಲ್ಲಿ ಜೊಂಜು, ಚಿಮಣಿ ದೀಪ ಹಚ್ಚಿಕೊಂಡು ಯಕ್ಷಗಾನ ಪ್ರದರ್ಶನ, ಮನರಂಜನೆ ನೀಡಿದ ಹೆಗ್ಗಳಿಕೆ ಈ ಜೋಗಿಮನೆಯ ಬಾಳಗಾರಿನ ಮೇಳದ್ದು. ಈಗ ಮತ್ತೆ 15.10.2021ರಂದು ವಿಜಯದಶಮಿಯ ದಿನಂದು ಸಂಜೆ ಚಂಡೆಯ ಠೇಂಕಾರ, ಮೃದಂಗದ ಮಾಧುರ್ಯ, ಭಾಗವತಿಕೆಯ ನಿನಾದ ಜೋಗಿಮನೆ ಅಂಗಳದಲ್ಲಿ ಅನಾವರಣಗೊಳ್ಳಲಿದೆ. ಅಂದಿನ ಕಲಾವಿದರ ಸಮಕಾಲೀನರು, ಗ್ರಾಮಸ್ಥರು ಈ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.

    ಚಿತ್ರ-ಬರಹ: ಡಾ.ಬಾಲಕೃಷ್ಣ ಹೆಗಡೆ, ಜೋಗಿಮನೆ

    Share This
    300x250 AD
    300x250 AD
    300x250 AD
    Leaderboard Ad
    Back to top