ಶಿರಸಿ: ಅಭಿವೃದ್ಧಿಗೆ ಅಡ್ಡಗಾಲಾದ, ಪರಿಸರ ಹೋರಾಟಗಾರರ ನಡೆ ಖಂಡಿಸಿ ಹೆಗಡೆಕಟ್ಟಾ ಕ್ರಾಸ್ ಬಳಿ ಕುಮಟಾ-ಶಿರಸಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.
ಸಮಗ್ರ ಅಭಿವೃದ್ಧಿ ವೇದಿಕೆ ನೇತೃತ್ವದಲ್ಲಿ ಶುಕ್ರವಾರ ಶಿರಸಿಯ 25 ಕ್ಕೂ ಹೆಚ್ಚು ಸಂಘಟನೆ ಕಾರ್ಯಕರ್ತರು ಹೆಗಡೆಕಟ್ಟಾ ಕ್ರಾಸ್ ಬಳಿ ರಸ್ತೆ ತಡೆ ನಡೆಸಿದರು. ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ಬಂದ್ ಮಾಡಿ ಕಾಮಗಾರಿಗೆ ಸಂಬಂಧಪಟ್ಟ ಗುತ್ತಿಗೆ ಕಂಪನಿ ಪ್ರತಿನಿಧಿಗಳು, ಅಧಿಕಾರಿಗಳು ಸ್ಥಳಕ್ಕೆ ಬಂದು ಸ್ಪಷ್ಟನೆ ನೀಡುವಂತೆ ಆಗ್ರಹಿಸಿದರು.
ಶಿರಸಿ- ಕುಮಟಾ ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಒತ್ತಾಯಿಸಿದ ಕಾರ್ಯಕರ್ತರು ಪರಿಸರ ಹೋರಾಟಗಾರರು ಅಭಿವೃದ್ಧಿಗೆ ಅಡ್ಡಗಾಲಾಗಿದ್ದಾರೆ. ಕಾರಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಆರಂಭಿಸಬೇಕು ಎಂದು ಆಗ್ರಹಿಸಿದರು.
ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಮಾತನಾಡಿ, ನ್ಯಾಯಾಲಯದಿಂದ ಕಾಮಗಾರಿಗೆ ಒಪ್ಪಿಗೆಯಿದೆ. ಆದರೆ ಗುತ್ತಿಗೆದಾರರ ವಿಳಂಬ ನೀತಿಯಿಂದಾಗಿ ಕಾಮಗಾರಿಗೆ ವೇಗ ಸಿಕ್ಕಿಲ್ಲ. ತಕ್ಷಣ ಕಾಮಗಾರಿ ಆರಂಭಿಸಬೇಕು ಎಂದರು.
ಸಾಮಾಜಿಕ ಕಾರ್ಯಕರ್ತ ಪರಮಾನಂದ ಹೆಗಡೆ ಮಾತನಾಡಿ, ಜಿಲ್ಲೆಯ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸ್ವಯಂ ಘೋಷಿತ ಪರಿಸರವಾದಿಗಳು ತೊಡಕಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅಂಥ ಪರಿಸರವಾಗಿಗಳ ಮನೆ ಎದುರು ಪ್ರತಿಭಟಿಸುವ ಮೂಲಕ ಬಿಸಿ ಮುಟ್ಟಿಸಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಯೋಜನೆಯ ತಾಂತ್ರಿಕ ಸಲಹೆಗಾರ ಕಣ್ಣನ್ ಮಾತನಾಡಿ, 2022ರ ಮಾರ್ಚ್ ಒಳಗೆ ಶಿರಸಿ- ಕುಮಟಾ ರಸ್ತೆಯ ಬಂಡಲ ವರೆಗಿನ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದರು. ನಂತರ ಪ್ರತಿಭಟನೆ ಕೈಬಿಡಲಾಯಿತು.
ಈ ವೇಳೆ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಸಾಮಾಜಿಕ ಕಾರ್ಯಕರ್ತರಾದ ಜಿ.ಎನ್.ಭಟ್ಟ, ಎಸ್.ಕೆ.ಭಾಗವತ, ದೀಪಕ ದೊಡ್ಡೂರು, ಅನಿ
ಲ ನಾಯಕ ಇತರರಿದ್ದರು