ಶಿರಸಿ: ತಾಲೂಕಿನ ಬನವಾಸಿ ಅರಣ್ಯ ವಲಯ ವ್ಯಾಪ್ತಿಯ ಶಿವಳ್ಳಿ, ದಾನಂದಿ ಭಾಗದಲ್ಲಿ ಚಿರತೆ ಜಾನುವಾರುಗಳ ಮೇಲೆ ಕೆಲ ದಿನಗಳಿಂದ ಸತತ ದಾಳಿ ನಡೆಸುತ್ತಿದೆ. ಅಪಾಯಕಾರಿ ಚಿರತೆ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ.
ಬಿಸಲಕೊಪ್ಪ, ಎಕ್ಕಂಬಿ, ಶಿವಳ್ಳಿ ಭಾಗದಲ್ಲಿ ಸಮೃದ್ಧ ಅರಣ್ಯ ಪ್ರದೇಶ, ಸಾಗುವಾನಿ ನೆಡುತೋಪು ಹೆಚ್ಚಿದ್ದು ಪ್ರಾಣಿಗಳ ಓಡಾಟಕ್ಕೆ ಅನುಕೂಲವಾಗಿದೆ. ಹೀಗಾಗಿ ಚಿರತೆ, ಆನೆಗಳು ಈ ಪ್ರದೇಶಕ್ಕೆ ಲಗ್ಗೆ ಇಡುವುದು ಸಾಮಾನ್ಯವಾದಂತಾಗಿದೆ. ಹದಿನೈದು ದಿನಗಳಿಂದ ಈಚೆಗೆ ಬೊಪ್ಪನಳ್ಳಿ, ದಾನಂದಿ ಭಾಗದಲ್ಲಿ ಸುಮಾರು ನಾಲ್ಕು ಹಸುಗಳನ್ನು ಚಿರತೆ ಬಲಿ ಪಡೆದಿದೆ. ಈ ಪೈಕಿ ಎರಡು ಕರು ಮತ್ತು ಎರಡು ದೊಡ್ಡ ಆಕಳು ಸೇರಿದೆ.
ಜಾನುವಾರುಗಳ ಮೇಲೆ ನಿರಂತರ ದಾಳಿ ನಡೆಸುತ್ತಿರುವ ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆ ಆಯ್ದ ಜಾಗಗಳನ್ನು ಗುರುತಿಸಿ ಅಲ್ಲಿ ಬೋನುಗಳನ್ನು ಇರಿಸಿದೆ. ಅರಣ್ಯ ರಕ್ಷಕರು ಗಸ್ತು ತಿರುಗಲು ಆರಂಭಿಸಿದ್ದಾರೆ. ಚಳಿಗಾಲದ ಆರಂಭದ ಅವಧಿಯಲ್ಲಿ ಈ ಭಾಗದಲ್ಲಿ ಚಿರತೆ ಓಡಾಟ ಹೆಚ್ಚುತ್ತಿತ್ತು. ಈ ಬಾರಿ ಅವಧಿಗೆ ಮುನ್ನಚಿರತೆ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಜನರ ಆತಂಕ ದೂರ ಮಾಡಲು ಜಾನುವಾರುಗಳನ್ನು ಬಲಿ ಪಡೆಯುತ್ತಿರುವ ಪ್ರಾಣಿ ಸೆರೆ ಹಿಡಿಯುವ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಬನವಾಸಿ ಆರ್.ಎಫ್.ಒ.ಉಷಾ ಕಬ್ಬೇರ ತಿಳಿಸಿದರು. ಚಿರತೆ ದಾಳಿಗೆ ಮೃತಪಟ್ಟ ಆಕಳುಗಳ ವಾರಸುದಾರರಿಗೆ ಇಲಾಖೆಯಿಂದ ಪರಿಹಾರ ಒದಗಿಸಲಾಗುವದು. ಗ್ರಾಮಗಳತ್ತ ಚಿರತೆ ನುಗ್ಗದಂತೆ ಎಚ್ಚರವಹಿಸಲಾಗುತ್ತದೆ ಎಂದು ಹೇಳಿದರು.
ಕೊರ್ಸೆ,ದಾನಂದಿ, ಶಿವಳ್ಳಿ, ಬೊಪ್ಪನಳ್ಳಿ, ಸಂಬಯ್ಯನಜಡ್ಡಿ, ಗೇರಮನೆ ಸುತ್ತಮುತ್ತ ಚಿರತೆ ಹದಿನೈದು ದಿನಗಳಿಂದ ನಿರಂತರವಾಗಿ ಓಡಾಡುತ್ತಿದೆ. ಈಚೆಗೆ ಮೂರು ಚಿರತೆಗಳು ಒಟ್ಟೋಟ್ಟಿಗೆ ಇದ್ದಿದ್ದನ್ನು ನೋಡಿದವರಿದ್ದಾರೆ ಎಂದು ಸ್ಥಳೀಯ ರಾಘವೇಂದ್ರ ಕೊರ್ಸೆ ಹೇಳಿದರು. ಚಿರತೆ ಭಯದಿಂದ ಮಕ್ಕಳು ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಜನರು ಸೊಪ್ಪಿನ ಬೆಟ್ಟ, ತೋಟಕ್ಕೆ ತೆರಳಲು ಆತಂಕ ಪಡುತ್ತಿದ್ದಾರೆ ಎಂದರು.