ಶಿರಸಿ: ರಾಜಕೀಯ ದುರುದ್ದೇಶದಿಂದ ಯಲ್ಲಾಪುರ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಸೊಸೈಟಿ ರಚಿಸಲು ಕೆಲವರು ಮುಂದಾಗಿರುವುದು ಕಾನೂನು ಬಾಹೀರ ಎಂದು ಯಲ್ಲಾಪುರ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನಾಗರಾಜ ಕವಡಿಕೆರೆ ಹೇಳಿದರು.
ನಗರದ ನೆಮ್ಮದಿ ಕುಠೀರದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಗೆ ಒಂದರಂತೆ ಸಹಕಾರಿ ಸಂಘ ರಚಿಸಲು ಅವಕಾಶ ಇದೆ. ಆದರೆ ಕನಿಷ್ಠ 4000 ಎಕರೆ ಕೃಷಿ ಭೂಮಿ ಹಾಗೂ 600 ಕುಟುಂಬ ಇರಬೇಕೆನ್ನುವ ನಿಯಮ ಇದೆ. ಹಾಲಿ ಚಂದಗುಳಿ ಹಾಗೂ ನಂದೊಳ್ಳಿ ಭಾಗದಲ್ಲಿ ಸಂಘ ರಚಿಸಲು ಈ ನಿಯಮದ ಪ್ರಕಾರ ಅನುಮೋದನೆ ನೀಡಲು ಆಗದು. ಜೊತೆಗೆ ಈ ಪ್ರದೇಶದಲ್ಲಿ ನಮ್ಮ ಸಂಸ್ಥೆಯಿಂದ ಶಾಖೆಯ ಮೂಲಕ ರೈತರಿಗೆ ಎಲ್ಲ ಅನುಕೂಲ ನೀಡಲಾಗುತ್ತಿದೆ. ಆದರೂ ಸಹಕಾರ ಇಲಾಖೆ ನಿಬಂಧಕರು ನೊಂದಣಿ ಪೂರ್ವ ಶೇರು ಸಂಗ್ರಹಣೆಗೆ ಅನುಮತಿ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದರು.
ಸಹಕಾರಿ ಸಂಘದ ನಿರ್ದೇಶಕರಾದ ನರಸಿಂಹ ಕೋಣೆಮನೆ ಮಾತನಾಡಿ, ಈ ಸಂಬಂಧ ಸಲ್ಲಿಸಿದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಕಾನೂನು ಪ್ರಕಾರ ನಿರ್ಧಾರ ತೆಗೆದುಕೊಳ್ಳುವಂತೆ ಸೂಚಿಸಿದೆ. ಆದರೂ ಸಂಘ ರಚನೆಗೆ ಅವಕಾಶ ನೀಡುತ್ತಿರುವುದರ ಹಿಂದೆ ರಾಜಕೀಯ ಪ್ರಭಾವ ಇದ್ದಂತಿದೆ ಎಂದರು.
ಅಲ್ಲದೇ ಕಾನೂನು ಬಾಹೀರವಾಗಿ ಸಂಘ ರಚನೆಗೆ ಅನುಮೋದನೆ ನೀಡಿದ ಅಧಿಕಾರಿಗಳ ವಿರುದ್ಧವೂ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರ ಹೆಸರು ದುರ್ಬಳಕೆ: ಕಾನೂನು ಬಾಹೀರವಾಗಿ ಸಂಘವನ್ನು ನೋಂದಾಯಿಸಲು ಪ್ರಯತ್ನಿಸುತ್ತಿರುವವರಿಂದ ಸಚಿವರ ಹೆಸರನ್ನು ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಟಿ.ಆರ್. ಹೆಗಡೆ, ಪ್ರಮುಖರಾದ, ತಿಮ್ಮಪ್ಪ ಭಟ್, ಸಂತೋಷ ನಾಯ್ಕ ಸೇರಿದಂತೆ ಇತರರು ಇದ್ದರು.