ಕಾರವಾರ: ಜಿಲ್ಲೆಯ ಅಭಿವೃದ್ದಿ ಬಗ್ಗೆ ಚಿಂತನೆ ನಡೆಸುತ್ತಿರುವ ಅನಂತಕುಮಾರ್ ಹೆಗಡೆಯವರ ತೀರ್ಮಾನಕ್ಕೆ ಸ್ವಾಗತವಿದೆ. ಸ್ಥಳೀಯ ಮೀನುಗಾರರನ್ನು, ಸಾರ್ವಜನಿಕರನ್ನ ಸಹ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಚಟುವಟಿಕೆ ಮಾಡಲಿ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.
ಜಿಲ್ಲೆಯ ಅಭಿವೃದ್ಧಿ ಬಗ್ಗೆ ಸಂಸದ ಅನಂತಕುಮಾರ್ ಹೆಗಡೆ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೇಳಿಕೆ ಹಂಚಿಕೊಂಡಿರುವ ಅಸ್ನೋಟಿಕರ್, ಜಿಲ್ಲೆಯಲ್ಲಿ ಬಂದರುಗಳು ಅಭಿವೃದ್ದಿಯಾಗಬೇಕಾಗಿದೆ, ಈ ಬಗ್ಗೆ ಜಿಲ್ಲೆಯ ಜನರು ಸಹ ಅವಲೋಕನ ಮಾಡಬೇಕು. ಬಂದರು ಅಭಿವೃದ್ಧಿಯಾದರೆ ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದಿದ್ದಾರೆ.
ಗುಜರಾತ್ ಭಾಗದಲ್ಲಿ ಮೀನುಗಾರರ ಸಂಖ್ಯೆ ಕಡಿಮೆಯಿದ್ದು, ಅಲ್ಲಿ ಸುಲಭವಾಗಿ ಬಂದರುಗಳು ಅಭಿವೃದ್ಧಿಯಾಗಿದೆ. ಅಲ್ಲದೇ ದೊಡ್ಡ ಪ್ರಮಾಣದಲ್ಲಿ ವ್ಯವಹಾರ ಪ್ರದೇಶ ಸಹ ಅಭಿವೃದ್ಧಿಯಾಗಿದೆ. ಆದರೆ ಜಿಲ್ಲೆಯಲ್ಲಿ ಬಂದರು ಪ್ರದೇಶದ ಸಮೀಪದಲ್ಲಿಯೇ ಸಾಕಷ್ಟು ಸಂಖ್ಯೆಯಲ್ಲಿ ಮೀನುಗಾರರು ಮೀನುಗಾರಿಕೆ ಮೂಲಕ ತಮ್ಮ ಜೀವನ ಕಂಡುಕೊಂಡಿದ್ದಾರೆ. ಜಿಲ್ಲೆಯಲ್ಲಿ ಬಂದರು ಪ್ರದೇಶ ಅಭಿವೃದ್ಧಿಯಾಗಬೇಕು, ಜನರ ಸಮಸ್ಯೆಯೂ ಬಗೆಹರಿಯಬೇಕಾಗಿದೆ. ಬಂದರು ಅಭಿವೃದ್ಧಿ ಮಾಡುವುದಕ್ಕೆ ನನ್ನ ಬೆಂಬಲವಿದೆ. ಆದರೆ ಬಂದರು ಪ್ರದೇಶದಲ್ಲಿ ವಾಸವಿರುವ ಮೀನುಗಾರರ ಸಮಸ್ಯೆಯನ್ನೂ ಸಹ ನಾವು ಅರಿಯಬೇಕು. ಸಂಸದ ಅನಂತಕುಮಾರ್ ಹೆಗಡೆ ಬಂದರು ಅಭಿವೃದ್ಧಿ ಮಾಡಲು ಹಣ ಮಂಜೂರಾದಾಗ ಮೀನುಗಾರರನ್ನ ಕರೆಸಿ ಅವರ ಸಮಸ್ಯೆ ಆಲಿಸಿ ಬಗೆಹರಿಸುವ ಕಾರ್ಯ ಮಾಡಿದ್ದರೆ ಬಂದರು ಇಷ್ಟರೊಳಗೆ ಇನ್ನಷ್ಟು ಅಭಿವೃದ್ಧಿಯಾಗುತ್ತಿತ್ತು, ಎಂದು ಹೇಳಿದ್ದಾರೆ.
ಎಲ್ಲಾ ಜನಪ್ರತಿನಿಧಿಗಳು ಸ್ಥಳೀಯ ಮೀನುಗಾರರನ್ನು, ಸಾರ್ವಜನಿಕರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಬಂದರು ಅಭಿವೃದ್ಧಿ ಮಾಡುವ ಕಾರ್ಯವನ್ನು ಮಾಡಬೇಕು. ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಎಂದು ಬಂದಾಗ ಯಾತಕ್ಕಾಗಿ ವಿರೋಧವಾಗುತ್ತಿದೆ ಎನ್ನುವ ಕಾರಣ ತಿಳಿಯಬೇಕು. ಮುಂದಿನ ದಿನದಲ್ಲಿ ಬೇಲೇಕೇರಿ, ಹೊನ್ನಾವರ ಬಂದರು ಅಭಿವೃದ್ಧಿ ಬಗ್ಗೆ ಸಹ ಅನಂತಕುಮಾರ್ ಹೇಳಿದ್ದು, ಅಲ್ಲಿನ ಜನರನ್ನ ಸಹ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿದೆ. ಕೊರೊನಾ ಹಿನ್ನಲೆಯಲ್ಲಿ ಜಿಲ್ಲೆಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಂದರು ಅಭಿವೃದ್ಧಿಯಾಗಲಿ, ವಿಮಾನ ನಿಲ್ದಾಣವಾಗಲಿ ಮುಂದಿನ ದಿನದಲ್ಲಿ ಸ್ಥಳೀಯರಿಗಿಂತ ಹೊರಗಿನವರಿಗೆ ಉದ್ಯೋಗ ಕೊಡುವ ಕಾರ್ಯ ಆಗುತ್ತದೆ. ಇದನ್ನ ತಪ್ಪಿಸಬೇಕು. ಸ್ಥಳೀಯರಿಗೆ ಈ ಯೋಜನೆಯಿಂದ ಆಗುವ ಲಾಭವನ್ನ ಮುಂಚೆಯೇ ತಿಳಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಅಭಿವೃದ್ಧಿ ಯೋಜನೆಗಳು ವಾಪಸ್ ಹೋಗದಂತೆ ಜನರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಸಂಸದರು ಕಾರ್ಯರೂಪಕ್ಕೆ ತರಲು ಪ್ರಯತ್ನ ನಡೆಸಲಿ ಎಂದು ಆನಂದ್ ಅಸ್ನೋಟಿಕರ್ ಒತ್ತಾಯಿಸಿದ್ದಾರೆ.