ಶಿರಸಿ: ಶಿರಸಿ- ಕುಮಟಾ ರಸ್ತೆ ಅಗಲೀಕರಣ ಕಾಮಗಾರಿ ತ್ವರಿತಗತಿಯಲ್ಲಿ ಆರಂಭವಾಗಬೇಕು ಎಂದು ಒತ್ತಾಯಿಸಿ ಕರೆ ನೀಡಿದ ರಸ್ತೆ ತಡೆ ಹೋರಾಟಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದೆ ಎಂದು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಮುಖ್ಯಸ್ಥ ಪರಮಾನಂದ ಹೆಗಡೆ ತಿಳಿಸಿದರು.
ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಅ. 8ರಂದು ಬೆಳಗ್ಗೆ 10 ಗಂಟೆಗೆ ಹೆಗಡೆಕಟ್ಟಾ ಕ್ರಾಸ್ ನಲ್ಲಿ ರಸ್ತೆ ತಡೆ ನಡೆಸಲು ತೀರ್ಮಾನಿಸಲಾದೆ. ಇದಕ್ಕೆ ತಾಲೂಕಿನ ಎಲ್ಲ ಸಂಘಟನೆಗಳು ಬೆಂಬಲ ನೀಡಿವೆ ಎಂದು ಹೇಳಿದರು. ನಕಲಿ ಪರಿಸರ ಹೋರಾಟಗಾರರು ಕಾಮಕಾರಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ನ್ಯಾಯಾಲಯದ ಮೆಟ್ಟಿಲೇರುವುದಕ್ಕೆ ಜನಾಕ್ರೋಷ ವ್ಯಕ್ತವಾಗಿದೆ. ರಸ್ತೆ ಅಭಿವೃದ್ಧಿ ಬೆಂಬಲಿಸಿ ಜನ ಬೆಂಬಲ ವ್ಯಕ್ತವಾಗಿದೆ ಎಂದರು. ಕಾರಣ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು ಹಾಗೂ ಕಾಮಗಾರಿ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿರುವ ಪರಿಸರ ವಾದಿಗಳ ವಿರುದ್ಧವೂ
ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅ.8ರ ಪ್ರತಿಭಟನೆಗೆ ಕರ್ನಾಟಕ ರಕ್ಷಣಾ ವೇದಿಕೆ (ಗಜಸೇನೆ), ಜೀವಜಲ ಕಾರ್ಯಪಡೆ, ಶಿರಸಿ ಜಿಲ್ಲಾ ಹೋರಾಟ ಸಮಿತಿ, ಅಂಜನಾದ್ರಿ ಗೆಳೆಯರ ಬಳಗ, ತರಕಾರಿ ವ್ಯಾಪಾರಸ್ಥರು, ಆಟೋ ಚಾಲಕ, ಮಾಲಕರ ಸಂಘ, ರಾಘವೇಂದ್ರ ಸರ್ಕಲ್ ಗೆಳೆಯರ ಬಳಗ, ಲಾರಿ ಚಾಲಕ, ಮಾಲಕ ಸಂಘ, ರೆಡ್ ಆ್ಯಂಟ್ ಪ್ರೆಂಡ್ಸ್ ಗ್ರೂಪ್, ಬಾರ್ ಬೆಂಡಿಂಗ್ ಅಸೋಸಿಯೇಷನ್, ರಕ್ತದಾನಿಗಳ ಬಳಗ, ಸ್ಕೊಡ್ ವೆಸ್ ಸೇರಿದಂತೆ ಹತ್ತಾರು ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ತಿಳಿಸಿದರು.
ಪ್ರತಿಭಟನೆ ವೇಳೆ ಕಾಮಗಾರಿ ಗುತ್ತಿಗೆ ಕಂಪನಿ ಪ್ರತಿನಿಧಿಗಳು, ಸರ್ಕಾರದ ಪ್ರತಿನಿಧಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಿ ಸರಿಯಾದ ಸ್ಪಷ್ಟನೆ ನೀಡುವವರೆಗೂ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ, ಉದ್ಯಮಿ ಉಪೇಂದ್ರ ಪೈ, ಶಶಿ ಪಂಡಿತ, ಉಮೇಶ ಹರಿಕಂತ್ರ ಇತರರು ಇದ್ದರು.