ಭಟ್ಕಳ: ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಕೃಷಿ ಭೂಮಿಗೆ ಸಮುದ್ರದ ಉಪ್ಪು ನೀರು ತಡೆಗಟ್ಟುವ ಉದ್ದೇಶದಿಂದ 100 ಕೋಟಿ ವೆಚ್ಚದಲ್ಲಿ ಖಾಲ್ರ್ಯಾಂಡ್ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ಸಿಕ್ಕಿರುವುದಕ್ಕೆ ಶಾಸಕ ಸುನೀಲ ನಾಯ್ಕ ಹರ್ಷ ವ್ಯಕ್ತಪಡಿಸಿದ್ದಾರೆ.
ಭಟ್ಕಳದ ಹೆಬೆಳೆಯ ಹೊನ್ನೆಗದ್ದೆ, ಗೊಂಡರಕೇರಿ, ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಜಾಲಿಕೋಡಿ ಇನ್ನಿತರ ಪ್ರದೇಶದ ಹಾಗೂ ಹೊನ್ನಾವರ ತಾಲೂಕಿನ ವಿವಿಧ ಪ್ರದೇಶದಲ್ಲಿ ಉಪ್ಪು ನೀರು, ಕೃಷಿ ಭೂಮಿ ಮತ್ತು ಬತ್ತದ ಗದ್ದೆಗಳಿಗೆ ನುಗ್ಗುತ್ತಿರುವುದರಿಂದ ಬೆಳೆ ಬೆಳೆಯಲಾಗದೇ ರೈತರು ತೀರಾ ತೊಂದರೆ ಅನುಭವಿಸುತ್ತಿರುವುದನ್ನು ಹಾಗೂ ಕಳೆದ ಹಲವು ವರ್ಷಗಳಿಂದ ಈ ಭಾಗದಲ್ಲಿ ಈ ಸಮಸ್ಯೆ ಉಲ್ಬಣಗೊಂಡಿರುವುದನ್ನು ಮನಗಂಡ ಸುನಿಲ್ ನಾಯ್ಕ ಕ್ರಿಯಾ ಯೋಜನೆಯನ್ನು ತಯಾರು ಮಾಡಿ ಸರಕಾರಕ್ಕೆ ಸಲ್ಲಿಸಿದ್ದರು. ಕೃಷಿ ಭೂಮಿಗಳಿಗೆ ಉಪ್ಪು ನೀರು ನುಗ್ಗುವುದನ್ನು ತಡೆಯಲು ಶಾಶ್ವತ ಪರಿಹಾರ ಕಲ್ಪಿಸಲು ಶಾಸಕ ಸುನೀಲ ನಾಯ್ಕ ತಮ್ಮ ಕ್ಷೇತ್ರದಲ್ಲಿ 100 ಕೋಟಿ ವೆಚ್ಚದಲ್ಲಿ ಖಾಲ್ರ್ಯಾಂಡ್ ನಿರ್ಮಾಣ ಮಾಡಬೇಕೆನ್ನುವುದು ಇವರ ಕೋರಿಕೆಯಾಗಿತ್ತು.
ಮಂಗಳವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಖಾಲ್ರ್ಯಾಂಡ್ ಕ್ರಿಯಾಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ, ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರನ್ನು ಶಾಸಕ ಸುನೀಲ ನಾಯ್ಕ ಅಭಿನಂದಿಸಿದ್ದಾರೆ.