ಬೆಂಗಳೂರು: ರಾಜ್ಯದಲ್ಲಿ 2023 ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಸರ್ಕಾರದ ಅಪರ ಕಾರ್ಯದರ್ಶಿಗಳು ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ ಎಂದು ಕೃಷಿ ಸಚಿವ ಬಿ. ಸಿ. ಪಾಟೀಲ್ ತಿಳಿಸಿದ್ದಾರೆ.
ಅವರು ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರ ಆದಾಯ ದ್ವಿಗುಣಗೊಳಿಸುವ ಕುರಿತು ಸಮಗ್ರ ಕೃಷಿ ಪದ್ಧತಿಯ ವಿಸ್ತರಣೆ, ಜನಪ್ರಿಯತೆ ಕಾರ್ಯಕ್ರಮ ಅಳವಡಿಕೆಗೆ ಆರ್‍ಕೆವಿವೈ ಯೋಜನೆಯಡಿ 7234 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್‍ಗಳಲ್ಲಿಯೂ ಈ ಯೋಜನೆ ಅನುಷ್ಠಾನವಾಗಲಿದೆ ಎಂದು ಅವರು ಹೇಳಿದ್ದಾರೆ.
ಹಾಗೆಯೇ ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆಗೂ ಅಗತ್ಯ ಮಾತುಕತೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹಾಗೆಯೇ ಈ ಬಾರಿ ರಾಜ್ಯದಲ್ಲಿ 158.73 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಉತ್ಪಾದನೆಯಾಗಿದ್ದು, ಸರಾಸರಿಗಿಂತ 10% ಹೆಚ್ಚಾಗಿದೆ. ದೇಶದ ಸರಾಸರಿಗೆ ಹೋಲಿಕೆ ಮಾಡಿದಲ್ಲಿ 2% ಹೆಚ್ಚಳವಾಗಿದೆ ಎಂದು ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ರೈತರ ವಿದ್ಯಾನಿಧಿ ಯೋಜನೆಯಡಿ 8,931 ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ 2.44 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 36 ಬೆಳೆಗಳಿಗೆ ತಕ್ಕಂತೆ 12.80 ಲಕ್ಷ ರೈತರು ಬೆಳೆ ವಿಮೆ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಬಿ. ಸಿ. ಪಾಟೀಲ್ ಹೇಳಿದ್ದಾರೆ.