ಸಿದ್ದಾಪುರ: ಗ್ರಾಮೀಣ ಭಾಗದ ಎಲ್ಲ ಮಹಿಳೆಯರು, ಮಕ್ಕಳು ಸೇರಿದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉತ್ತಮ ಆರೋಗ್ಯ ಹಾಗೂ ವೈದ್ಯಕೀಯ ಸೇವೆ ಸಕಾಲದಲ್ಲಿ ದೊರೆಯುವಂತಾಗಬೇಕು. ಆಗ ಮಾತ್ರ ಸಮಾಜದ ನಿಜವಾದ ಅಭಿವೃದ್ಧಿ ಸಾಧ್ಯ ಎಂದು ಶಿಕ್ಷಣ ಪ್ರಸಾರಕ ಸಮಿತಿ ಉಪಾಧ್ಯಕ್ಷ ಡಾ. ಶಶಿಭೂಷಣ ಹೆಗಡೆ ಹೇಳಿದರು.
ಅವರು ಕ್ಯಾದಗಿಯ ಸೇವಾ ಸಹಕಾರಿ ಸಂಘದಲ್ಲಿ ಗಣೇಶ ಹೆಗಡೆ ದೊಡ್ಮನೆ ಜನ್ಮ ಶತಾಬ್ದಿ ಅಂಗವಾಗಿ ಧನ್ವಂತರಿ ಆಯುರ್ವೇದ ಕಾಲೇಜಿನ ಸಹಯೋಗದಲ್ಲಿ ಇಂದು ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕ್ಯಾದಗಿ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಗಣೇಶ ಭಟ್ಟ ಕೆರೆಹೊಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಧನ್ವಂತರಿ ಆಯುರ್ವೇದ ಕಾಲೇಜಿನ ಪ್ರಾಚಾರ್ಯೆ ಡಾ. ರೂಪಾ ಭಟ್ಟ, ಪೆÇ್ರ. ಶ್ರೀಕಾಂತ ಭಟ್ ಕುಳಿಬೀಡು, ಸಹಕಾರಿ ಸಂಘದ ನಿರ್ದೇಶಕರಾದ ವಿ. ಕೆ. ಗೌಡ ಕುಂಬಾರಕುಳಿ, ಪರಮೇಶ್ವರ ನಾಯ್ಕ ಶಿರಗಳ್ಳೆ, ಜಿ. ಆರ್. ನಾಯ್ಕ ಹೆಗ್ಗಾರಕೈ, ಕೆ. ಪಿ. ರಘುಪತಿ ಕ್ಯಾದಗಿ, ವಿಜಯಾ ನಾಯ್ಕ ಹಳ್ಳಿಬೈಲ್ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಎನ್. ಗೌಡ ಆಲ್ಮನೆ ನಿರೂಪಿಸಿದರು. ವಿ. ಕೆ. ಗೌಡ ವಂದಿಸಿದರು. ನಂತರ ಧನ್ವಂತರಿ ಆಯುರ್ವೇದ ಕಾಲೇಜಿನ ವೈದ್ಯರುಗಳಿಂದ ಉಚಿತ ತಪಾಸಣಾ ಶಿಬಿರ ನಡೆಯಿತು.