• Slide
  Slide
  Slide
  previous arrow
  next arrow
 • ಭಾರತೀಯ ಸೈನ್ಯವೇ ನನ್ನ ಕ್ರೀಡಾ ಸಾಧನೆಗೆ ಪ್ರೇರಣೆ; ಕಾಶಿನಾಥ ನಾಯ್ಕ

  300x250 AD

  ಯಲ್ಲಾಪುರ: ತನ್ನ ಕ್ರೀಡಾ ಸಾಧನೆಗೆ ಭಾರತೀಯ ಸೈನ್ಯವೇ ಪ್ರೇರಣೆ ಎಂದು ಟೋಕಿಯೋ ಒಲೆಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ನಿರಜ್ ಚೋಪ್ರಾ ಅವರ ತರಬೇತುದಾರರಾದ ಕಾಶಿನಾಥ ನಾಯ್ಕ ಅವರು ಹೇಳಿದರು.


  ಮಂಗಳವಾರ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಬೆಳಕಿನಂದ ಸಾಂಸ್ಕೃತಿಕ ಪ್ರತಿಷ್ಠಾನದ ಕ್ರೀಡಾ ವಿಭಾಗದಿಂದ ಹಮ್ಮಿಕೊಂಡ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಕಾರ್ಗಿಲ್ ಯುದ್ದದ ಅಂತ್ಯದ ವೇಳೆ ನಾನು ಸೇನೆ ಸೇರಿದೆ. ಅಲ್ಲಿನ ಕ್ರೀಡಾ ವಿಭಾಗ ಗಮನ ಸೆಳೆಯಿತು. ಅಲ್ಲಿ ಯಾವುದೇ ವಿಶೇಷ ತರಬೇತುದಾರರು ಇರಲಿಲ್ಲ. ಆಗ ಅಲ್ಲಿನ ಸೈನಾಧಿಕಾರಿಗಳೇ ಮಾರ್ಗದರ್ಶನ ನೀಡಿದರು. ಹೀಗಾಗಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು ಎಂದು ವಿವರಿಸಿದರು. ಸಾಧನೆ ಮಾಡಬೇಕಾದರೆ ಕಷ್ಟಗಳು ಸಹಜ. ಕಷ್ಟಗಳನ್ನು ಮೀರಿ ಬದುಕಿದಾಗ ಮಾತ್ರ ಸಾಧನೆ ಸಾಧ್ಯ. ನನಗೂ ಸಾಕಷ್ಟು ಸಮಸ್ಯೆಗಳಿದ್ದವು. ಅದನ್ನು ಮೀರಿ ಗೆಲ್ಲಬೇಕು ಎಂಬ ಛಲ ಇತ್ತು. ಆ ಛಲವೇ ನನ್ನನ್ನು ಗೆಲ್ಲಿಸಿದೆ ಎಂದು ಹೇಳಿದರು.


  ಬನವಾಸಿಯಿಂದ 5ಕಿ.ಮೀ ದೂರದ ಹಳ್ಳಿಯಲ್ಲಿ ಹುಟ್ಟಿದ ನಾನು ಮೊದಲು ಕೂಲಿ ಕೆಲಸ ಮಾಡುತ್ತಿದ್ದೆ. ನಂತರ ಬೇಕರಿಯಲ್ಲಿ ದುಡಿದೆ. ಅನೇಕ ಅಡೆ-ತಡೆಗಳನ್ನು ಎದುರಿಸಿ, ನಿರಂತರವಾಗಿ ಪ್ರಯತ್ನಿಸಿದ ಪರಿಣಾಮ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದೇನೆ ಎಂದರು. ಗ್ರಾಮೀಣ ಭಾಗದವರು ಸಾಧನೆ ಮಾಡಲು ಸಾಧ್ಯವಿಲ್ಲ ಎಂಬುದು ಸುಳ್ಳು. ಸಾಧನೆ ಮಾಡಲು ಮುಖ್ಯವಾಗಿ ಸ್ಪರ್ಧಾತ್ಮಕ ಮನೋಭಾವನೆ ಅಗತ್ಯವಿದೆ. ಮಕ್ಕಳು ಮೊಬೈಲ್‍ನಲ್ಲಿ ಆಟ ಆಡುವ ಬದಲು ಮೈದಾನದಲ್ಲಿ ಆಡಿದರೆ ಆರೋಗ್ಯ ದೊರೆಯುತ್ತದೆ. ಸ್ವಂತಕ್ಕಾಗಿ ಮಾಡಿದರೆ ಸ್ವಾರ್ಥ ಎನಿಸುತ್ತದೆ. ದೇಶಕ್ಕಾಗಿ ಮಾಡಿದಾಗ ದೊರೆಯುವ ಗೆಲುವಿನ ಸಂಭ್ರಮಕ್ಕೆ ಇಡೀ ದೇಶ ಸಾಕ್ಷಿಯಾಗುತ್ತದೆ ಎಂದರು.

  300x250 AD


  ಮಕ್ಕಳೊಂದಿಗೆ ಬೆರೆತ ಕಾಶಿನಾಥ ನಾಯ್ಕ: ಟೋಕಿಯೋ ಒಲೆಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ನಿರಜ್ ಚೋಪ್ರಾ ಅವರ ತರಬೇತುದಾರರಾದ ಕಾಶಿನಾಥ ನಾಯ್ಕ ಅವರು ಮಂಗಳವಾರ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಕ್ರೀಡಾ ತರಬೇತಿ ನೀಡಿದರು. ಶಾಲೆಯಲ್ಲಿ ನಡೆದ ಸಭಾ ಕಾರ್ಯಕ್ರಮದ ನಂತರ ನೇರವಾಗಿ ಮೈದಾನಕ್ಕೆ ಮಕ್ಕಳನ್ನು ಕರೆದೊಯ್ದ ಅವರು ಜಾವೆಲಿನ್ ಕುರಿತು ಪ್ರಾತ್ಯಕ್ಷಿತೆ ನೀಡಿದರು. ಅದಾದ ನಂತರ ಮಕ್ಕಳಿಂದ ಕ್ರಿಕೆಟ್ ಬಾಲ್ ಎಸೆದು ಅಭ್ಯಾಸ ಮಾಡಿಸಿದರು. ನಂತರ ಜಾವೆಲಿನ್ ಎಸೆತ ಮಾಡಿಸಿದರು. ದೂರದಲ್ಲಿರುವ ಮಾವಿನ ಮರಕ್ಕೆ ಕಲ್ಲು ಎಸೆದು ಕಾಯಿ ಕೊಯ್ಯುವ ಸಾರ್ಮಥ್ಯದ ಗ್ರಾಮೀಣ ಮಕ್ಕಳು ಉತ್ತಮ ಕ್ರೀಡಾಪಟುಗಳಾಗಬಲ್ಲರು ಎಂದು ಅವರು ಹೇಳಿದರು.


  ಕಾಶಿನಾಥ ನಾಯ್ಕ ಅವರನ್ನು ಸನ್ಮಾನಿಸಿದ ಲೆಕ್ಕ ಪರಿಶೋಧಕ ವಿಘ್ನೇಶ್ವರ ಗಾಂವ್ಕರ್ ಮಾತನಾಡಿ, ಮಕ್ಕಳು ಮಾನಸಿಕ ಹಾಗೂ ದೈಹಿಕ ಆರೋಗ್ಯ ಹೊಂದಿರಬೇಕು. ಸ್ಪರ್ಧಾತ್ಮಕ ಮನೋಭಾವನೆ ಬೆಳಸಿಕೊಳ್ಳಬೇಕು ಎಂದು ಕರೆ ನೀಡಿದರು. ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ ಅವರು ಇದ್ದರು. ವಿದ್ಯಾರ್ಥಿನಿ ನಿಖಿತಾ ಜಿ ನಾಯಕ ಪ್ರಾರ್ಥಿಸಿದರು. ರಾಘವೇಂದ್ರ ನಾಯ್ಕ ಸ್ವಾಗತಿಸಿದರು. ಮಹೇಶ ನಾಯ್ಕ ನಿರ್ವಹಿಸಿದರು. ಗುರು ಭಟ್ ವಂದಿಸಿದರು.

  ಕ್ರೀಡಾ ಅಕಾಡೆಮಿ ಸ್ಥಾಪನೆಯ ಕನಸು: ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿದ್ದಿ ಜನಾಂಗದವರು ಹೆಚ್ಚಿದ್ದಾರೆ. ಅವರನ್ನು ಸೇರಿದಂತೆ ಅನೇಕ ಗ್ರಾಮೀಣ ಕ್ರೀಡಾ ಪ್ರತಿಭೆಗಳು ಇಲ್ಲಿವೆ. ಅವರಿಗೆ ಸೂಕ್ತ ವೇದಿಕೆ ದೊರೆಯದ ಕಾರಣ ಪ್ರತಿಭೆಗಳು ಅನಾವರಣಗೊಂಡಿಲ್ಲ. ಗ್ರಾಮೀಣ ಭಾಗದವರಿಗೆ ತರಬೇತಿ ನೀಡಿ ಅವರನ್ನು ಮುಖ್ಯ ವಾಹಿನಿಗೆ ತರುವ ಕನಸು ನನ್ನದು. ಹೀಗಾಗಿ ಮುಂದಿನ ವರ್ಷ ಕ್ರೀಡಾ ಅಕಾಡೆಮಿ ಸ್ಥಾಪಿಸುವ ಚಿಂತನೆ ಇದೆ. – ಕಾಶಿನಾಥ ನಾಯ್ಕ, ರಾಷ್ಟ್ರೀಯ ಕ್ರೀಟಾಪಟು

  Share This
  300x250 AD
  300x250 AD
  300x250 AD
  Leaderboard Ad
  Back to top