ಶಿರಸಿ: ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿರುವ ಉತ್ತರ ಪ್ರದೇಶ ಸರ್ಕಾರದ ಕ್ರಮವನ್ನು ಖಂಡಿಸಿ, ಜಿಲ್ಲಾ ಕಾಂಗ್ರೆಸ್ ಘಟಕ ನಗರದ ಪತ್ರಿಕಾ ಭವನದಲ್ಲಿ ಹಿರಿಯ ಮುಖಂಡ ಎಸ್.ಕೆ. ಭಾಗ್ವತ್ ಅವರ ನೇತೃತ್ವದಲ್ಲಿ ಸುದ್ದಿಗೊಷ್ಠಿ ನಡೆಸಿ ಸರ್ಕಾರದಿಂದ ರೈತರ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ನಡೆದಿದೆ. ಅವರ ಮೇಲೆ ಕಾರು ಹತ್ತಿಸಿ ಹತ್ಯೆ ಮಾಡಲಾಗಿದೆ. ಇದು ಉತ್ತರ ಪ್ರದೇಶದಲ್ಲಿನ ಅಮಾನವೀಯತೆ, ಅರಾಜಕತೆಯನ್ನು ಸಾಬೀತು ಪಡಿಸಿದೆ ಎಂದು ಟೀಕಿಸಿದರು.
ಅಲ್ಲದೇ ಘಟನೆಯಲ್ಲಿ ಮೃತಪಟ್ಟ ರೈತರಿಗೆ ಸಾಂತ್ವನ ಹೇಳಲು ಹೋದ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿ, ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ಇಡಲಾಗಿದೆ. ಇಂತಹಾ ದೌರ್ಜನ್ಯವನ್ನು ನಾವು ಎಂದೂ ಸಹಿಸುವುದಿಲ್ಲ. ಘಟನೆ ಖಂಡಿಸಿ ಬೀದಿಗೆ ಇಳಿದು ಹೋರಾಟ ಮಾಡಲು ಸಿದ್ದರಿರುವುದಾಗಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ದೀಪಕ್ ದೊಡ್ಡುರು, ಶ್ರೀಲತಾ ಕಾಳೇರಮನೆ, ಕೃಷ್ಣ ಹಿರೇಹಳ್ಳಿ, ಪ್ರಸನ್ನ ಶೆಟ್ಟಿ, ಡಿ.ಎನ್. ಗಾಂವ್ಕರ್ ಇತರರು ಇದ್ದರು.