ಕುಮಟಾ: ಭಾನುವಾರ ಸಂಜೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಕಡ್ಲೆ ತೀರಕ್ಕೆ ಮೂರಿಯಾ ಮೀನಿನ ಕಳೆಬರ ಬಂದು ಬಿದ್ದಿದೆ. ಸುಮಾರು 1.5ಯಿಂದ 2 ಮೀಟರ್ ಉದ್ದ 20 ಕೆಜಿ ತೂಕ ಇರಬಹುದು ಎಂದು ಅಂದಾಜಿಸಲಾಗಿದೆ.
ಸಾಮಾನ್ಯವಾಗಿ ಈ ಮೀನು ಸಮುದ್ರದಲ್ಲಿ ಬಂಡೆಯ ಮಧ್ಯದಲ್ಲಿ ಇರುತ್ತದೆ.ಅರಬ್ಬೀ ಸಮುದ್ರದ ಆಳದಲ್ಲಿ ದ್ವಿಪದ ಬಂಡೆಯ ಮಧ್ಯ ಹೆಚ್ಚಾಗಿ ಕಂಡುಬರುತ್ತದೆ. ಪರ್ಶಿಯನ್ ಬೋಟ್ ಮೀನುಗಾರಿಕೆ ಮಾಡುವಾಗ ಆಗೊಮ್ಮೆ-ಈಗೊಮ್ಮೆ ಬಲೆಗೆ ಬೀಳುವುದು ಉಂಟು. ಸುಮಾರು 2 ಕ್ವಿಂಟಲ್ ತನಕ ತೂಕ ಇರುತ್ತದೆ. ಅತ್ಯಂತ ರುಚಿಕಟ್ಟಾಗಿರುವ ಈ ಮೀನಿನ ಮಾಂಸಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿಪರೀತ ಬೇಡಿಕೆಯೂ ಇದೆ. ಸ್ಥಳೀಯವಾಗಿ ಮಾರುಕಟ್ಟೆಯಲ್ಲಿಯೆ ಈ ಮೀನಿಗೆ ಪ್ರತಿ ಕೆಜಿಗೆ 400 ರಿಂದ 500 ರೂ.ಗಳ ವರೆಗೆ ಇದೆ.ಇಂತಹ ಮೀನಿನ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಮೀನುಗಾರ ಗಣೇಶ ಅಂಬಿಗ ಹೇಳುತ್ತಾರೆ. ಮೇಲಿಂದ ಮೇಲೆ ಚಂಡಮಾರುತ ಅಪ್ಪಳಿಸುವುದರಿಂದ ಈ ಮೀನಿನ ವಾಸಸ್ಥಳಕ್ಕೆ ಧಕ್ಕೆಯಾಗುವುದು ಒಂದುಕಡೆಯಾದರೆ ವಿಪರೀತ ಆಮ್ಲಜನಕದ ಕೊರತೆ ಉಂಟಾಗಿ ಇಂತಹ ಜಲಚರ ಸಾವಿಗೀಡಾಗುತ್ತಿದೆ ಎಂದು ತಜ್ಞರು ಹೇಳುತ್ತಾರೆ.
ಚಂಡಮಾರುತದಿಂದ ಅರಬ್ಬೀ ಸಮುದ್ರದ ಒಡಲಲ್ಲಿ ರಭಸದ ಸುಳಿಯಿಂದ ಜಲಚರಗಳಿಗೆ ತೊಂದರೆ ಉಂಟಗುತ್ತಿದೆ. ಇತ್ತೀಚಿನ ದಿನದಲ್ಲಿ ಅರಬ್ಬಿ ಸಮುದ್ರದಲ್ಲಿ ಜಲಚರಗಳಿಗೆ ಆಮ್ಲಜನಕದ ಕೊರತೆಯೂ ಉಂಟಾಗುತ್ತಿರಬಹುದು ಎಂದು ಸಾಗರ ತಜ್ಞರು ಹೇಳುವ ಮಾತಾಗಿದೆ. ಕಳೆದ ಒಂದು ವರ್ಷದಿಂದ ತೋಕ್ತೆ, ಗುಲಾಬ ಇತ್ಯಾದಿ ಚಂಡಮಾರುತಗಳು ಅರಬ್ಬಿ ಸಮುದ್ರದಲ್ಲೂ ಸಾಕಷ್ಟು ಅಲ್ಲೋಲ-ಕಲ್ಲೋಲ ಉಂಟುಮಾಡಿದ್ದು ಅನೇಕ ಜಲಚರಗಳು ಇದರಿಂದ ಪ್ರಾಣ ತೆತ್ತಿದೆ.
ಕಲುಷಿತ ಗೊಳ್ಳುತ್ತಿರುವ ಸಮುದ್ರ:
ಮಿತಿಗಿಂತ ಹೆಚ್ಚು ಮೀನುಗಾರಕಾ ಬೋಟಿಗೆ ಪರವಾನಗಿ ನೀಡುವುದರಿಂದ ಜಲಚರಗಳಿಗೆ ಆಮ್ಲಜನಕದ ಕೊರತೆ ಅರಬ್ಬಿ ಸಮುದ್ರದಲ್ಲಿ ಸಂಭವಿಸುತ್ತಿರಬಹುದು. ಬೋಟಗಳಿಂದ ಸೋರುವ ಇಂಜಿನ್ ತೈಲ,ಡಿಸೇಲ್‍ಗಳಿಂದಲೂ ನೀರು ಕಲುಷಿತವಾಗುತ್ತಿದೆ.
ಇತ್ತೀಚಿನ ದಿನದಲ್ಲಿ ಹೆಚ್ಚಿನ ದೋಣಿಗಳು ಯಾಂತ್ರೀಕೃತವಾಗಿರುವುದರಿಂದ ಸೋರುವ ತೈಲಗಳು ಸಮುದ್ರದ ಅಡಿಯಲ್ಲಿರುವ ಬಂಡೆಗೆ ಅಂಟಿಕೊಳ್ಳಲಿದೆ. ಇಲ್ಲಿಯೇ ಹೆಚ್ಚಾಗಿ ವಾಸಿಸುವ ಮೂರಿಯಾ ಮೀನು ಚಂಡಮಾರುತದ ಸಂದರ್ಭದಲ್ಲಿ ಮತ್ತಷ್ಟು ತೊಂದರೆಗೆ ಸಿಲುಕಿ ಸಾಯುತ್ತದೆ ಎನ್ನಲಾಗಿದೆ .ಸ್ಥಳಿಯ ಭಾಷೆಯಲ್ಲಿ ಈ ಮೀನಿಗೆ ಗೋಬ್ರಿಯಾ ಎಂದು ಕರೆಯಲಾಗುತ್ತದೆ. ಆಳ ಸಮುದ್ರದ ಬಂಡೆಯ ಮಧ್ಯವೇ ಇವುಗಳ ವಾಸಸ್ಥಳವಾಗಿದ್ದು ಇದರ ದೇಹದ ಶೇ.25 ರಷ್ಟು ಭಾಗದಷ್ಟು ಇದರ ದೊಡ್ಡದಾದ ಬಾಯಿ ಇರುತ್ತದೆ.ಅಪ್ಪಿ -ತಪ್ಪಿ ಎಲ್ಲಾದರೂ ಮೀನುಗಾರಿಕೆ ಸಂದರ್ಭದಲ್ಲಿ ಇದರ ಬಾಯಿಗೆ ಮೀನುಗಾರರ ಕೈ ಅದರ ಬಾಯಿಗೆ ತಾಗಿದರೆ ಮುಗಿಯಿತು ಆತನ ಕೈ ಅನ್ನು ತುಂಡುಮಾಡಿಯೇ ತೆಗೆಯ ಬೇಕಾಗುತ್ತದೆ ಎನ್ನುವುದು ಮೀನುಗಾರರ ಮಾತು. ಅಷ್ಟು ಗಟ್ಟಿಯಾಗಿ ಬಾಯನ್ನು ಹೊಂದಿರುವ ಈ ಮೀನು ನಾಡದೋಣಿ,ಪಾತಿದೋಣಿ, ಯಾಂತ್ರೀಕೃತ ದೋಣಿಯ ಬಲೆಗೆ ಈ ಮೀನು ಸಿಗುವುದಿಲ್ಲ. ಇಂತಹ ಅಪರೂಪದ ಅರಬ್ಬೀ ಮೀನಿನ ಬಗ್ಗೆ ಹೇಚ್ಚು ಸಂಶೋಧನೆಯೂ ಆಗಬೇಕಾಗಿದೆ.