ಶಿರಸಿ: ಶಿರಸಿ ಪ್ರತ್ಯೇಕ ಜಿಲ್ಲೆ ರಚನೆಗೆ ವೈಯಕ್ತಿಕವಾಗಿ ನನ್ನ ಯಾವುದೇ ವಿರೋಧ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಸ್ಪಷ್ಟಪಡಿಸಿದರು.
ನಿನ್ನೆಯಷ್ಟೇ ವಿಜಯನಗರ ನೂತನ ಜಿಲ್ಲೆ ಉದ್ಘಾಟನಾ ಸಮಾವೇಶದಲ್ಲಿ ಭಾಗವಹಿಸಿದ್ದ ಹೆಬ್ಬಾರ್ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿರು. ಶಿರಸಿ ಪ್ರತ್ಯೇಕ ಜಿಲ್ಲೆ ರಚನೆಗೆ ನನ್ನ ವಿರೋಧ ಇಲ್ಲ ಎನ್ನುವ ಮೂಲಕ ಜಿಲ್ಲಾ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಯಾವುದೇ ಜಿಲ್ಲೆ ಇಬ್ಬಾಗ ಮಾಡುವಾಗ ಪಕ್ಷದ ಪ್ರಮುಖರು, ಜಿಲ್ಲೆಯ ಪಕ್ಷಾತೀತ ಹಿರಿಯರ ಜತೆ ಚರ್ಚೆ ಮಾಡುವುದು ಅಗತ್ಯ. ನಂತರದಲ್ಲಿ ಇದರ ಬಗ್ಗೆ ನಿರ್ಣಯ ಮಾಡಬೇಕು. ಆದರೆ ನಾನು ಈವರೆಗೆ ಜಿಲ್ಲೆಯ ಜನಪ್ರತಿನಿಧಿಗಳ ಜತೆ ಚರ್ಚಿಸಿಲ್ಲ ಎಂದರು. ಜಿಲ್ಲೆ ವಿಂಗಡಣೆ ಮಾಡುವಾಗ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಯಲೇಬೇಕು. ಆದರೆ ವೈಯಕ್ತಿಕವಾಗಿ ಶಿರಸಿ ಜಿಲ್ಲೆಯಾದರೆ ನನ್ನ ವಿರೋಧವಿಲ್ಲ ಎಂದರು.
‘ಪ್ರಶಾಂತ’ಗೆ ಟಾಂಗ್: ಪ್ರಶಾಂತ ದೇಶಪಾಂಡೆ ಹಿರಿಯ ರಾಜಕಾರಣಿಯಂತೆ ಆಡುತ್ತಿದ್ದಾರೆ. ಅವರ ಮಾತೇ ಅವರ ಸಂಸ್ಕಾರ ಮತ್ತು ನಡವಳಿಕೆಯನ್ನು ಗುರುತಿಸುತ್ತದೆ. ರಾಜಕಾರಣದಲ್ಲಿ ಆರಂಭಿಕ ಹಂತದಲ್ಲೇ ತಾಳ್ಮೆ ಕಳೆದುಕೊಂಡರೆ ಹೇಗೆ? ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಇದೆ. ಸಾವಿರಾರು ಸವಾಲೂ ಬಾಕಿ ಇದೆ. ಈಗಲೇ ತಾಳ್ಮೆ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ವರ್ತಿಸುವುದು ಸರಿಯಲ್ಲ ಎಂದು ಕುಟುಕಿದರು.
ಶಿರಸಿ-ಕುಮಟಾ ರಸ್ತೆ ಕಾಮಗಾರಿಗೆ ಪರಿಸರ ಸಂಘಟನೆಗಳಿಂದ ಸಮಸ್ಯೆಯಾಗಿದ್ದು, ಈ ಬಗ್ಗೆ ನ್ಯಾಯಾಲಯದಲ್ಲಿ ದೂರು ಅರ್ಜಿ ದಾಖಲಾಗಿತ್ತು. ಇದೀಗ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ. ಹಾಗಾಗಿ ಸಾಗರಮಾಲಾ ಯೋಜನೆಯ ಈ ಕಾಮಗಾರಿಗೆ ವೇಗ ಸಿಗಲಿದೆ ಎಂದು ತಿಳಿಸಿದರು.