ಶಿರಸಿ: ಮೆಣಸಿ ಸೀಮೆಯ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ, ಶ್ರೀ ಗಜಾನನ ಮಾಧ್ಯಮಿಕ ಶಾಲೆ ಹಾಗೂ ಸರಕಾರಿ ಪ್ರೌಢಶಾಲೆ ಜಡ್ಡಿಗದ್ದೆ ಇವುಗಳ ಸಹಯೋಗದೊಂದಿಗೆ ಕಾನಮುಸ್ಕಿ ಫೌಂಡೇಶನ್ ಆಶ್ರಯದಲ್ಲಿ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ, ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮ ಅ.1 ರಂದು ವಾನಳ್ಳಿಯ ಶ್ರೀ ಗಜಾನನ ಮಾಧ್ಯಮಿಕ ಶಾಲೆಯ ಸಭಾಭವನದಲ್ಲಿ ನಡೆಯಿತು.
ಕಾನಮುಸ್ಕಿ ಫೌಂಡೇಶನ್‍ನಿಂದ ವಿದ್ಯಾರ್ಥಿಗಳಿಗೆ, `ಪ್ರೋತ್ಸಾಹಧನ’ ವಿತರಿಸಿ, ಮಾತನಾಡಿದ ಮಹಾತ್ಮಗಾಂಧಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎನ್.ಎಸ್.ಹೆಗಡೆ ಕೋಟಿಕೊಪ್ಪ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಧನ ಸಹಕಾರಿಯಾಗಲಿದೆ ಎಂದು ಅವರು ಕಾನಮುಸ್ಕಿ ಫೌಂಡೇಶನ್‍ನ ಕಾರ್ಯ ಚಟುವಟಿಕೆಗಳ ಕುರಿತು ಸವಿವರವಾಗಿ ಮಾತನಾಡಿದರು.
ಜಡ್ಡಿಗದ್ದೆ ಸರಕಾರಿ ಫ್ರೌಢಶಾಲೆಯ ಮುಖ್ಯೋಪಾಧ್ಯಯರಾದ ಜಿ.ಆರ್.ಹೆಗಡೆ ಮುಖ್ಯ ಅತಿಥಿಯಾಗಿ ಮಾತನಾಡಿ, ಗ್ರಾಮೀಣಾ ಪ್ರದೇಶದಲ್ಲಿಯ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಆರ್ಥಿಕವಾಗಿ ಸಂಕಷ್ಟದಲ್ಲಿರುವ, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ, ಮುಂದಿನ ಶಿಕ್ಷಣಕ್ಕೆ ಸಹಾಯ ನೀಡುತ್ತಿರುವುದು, ಉತ್ತಮ ವಿಷಯವಾಗಿದೆ. ಆದ್ದರಿಂದ ಕಾನಮುಸ್ಕಿ ಫೌಂಡೇಶನ್ ನಿರಂತರವಾಗಿ ಪ್ರೋತ್ಸಾಹಧನ ಮುಂದುವಸುವಂತಾಗಲಿ ಎಂದು ಆಶಿಸಿದರು.
ಅತಿಥಿಯಾಗಿ ಪಾಲ್ಗೊಂಡಿದ್ದ ಶ್ರೀ ಗ.ಮಾ.ಶಾಲೆಯ ಮುಖ್ಯೋಧ್ಯಾಪಕರಾದ ರಾಘವ ಅ. ಹೆಗಡೆ ಮಾತನಾಡಿ, ಮಕ್ಕಳಿಗೆ ಗುರುವಿನ ಕುರಿತಾಗಿ ಭಕ್ತಿ ಮತ್ತು ಶೃದ್ಧೆಯಿದ್ದಾಗ, ಗುರುವಿನಿಂದ ಒಳ್ಳೆಯ ಸಂಸ್ಕಾರ ಯುಕ್ತವಾದ ಶಿಕ್ಷಣ ಪಡೆದು ನಿರ್ದಿಷ್ಟವಾದ ಗುರಿ ತಲುಪಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಜಡ್ಡಿಗದ್ದೆ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ಪೂರೈಸಿದ, ಅಶ್ವಿನಿ ದೇವಡಿಗ, ವಾನಳ್ಳಿ ಪ್ರೌಢಶಾಲೆಯ ವಿನಾಯಕ.ನ ಭಟ್ಟ ಹಾಗೂ ಸುಮಿತ್ರಾ ಟಿ. ಮರಾಠಿ ಇವರಿಗೆ ಪ್ರೋತ್ಸಾಹಧನ ವಿತರಿಸಲಾಯಿತು. ವಿದ್ಯಾರ್ಥಿಗಳ ಪರವಾಗಿ ವಿನಾಯಕ ಭಟ್ಟ ಮಾತನಾಡಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾಗ, ಪ್ರೋತ್ಸಾಹ ಧನದ ರೂಪದಲ್ಲಿ ಶಕ್ತಿ ದೊರೆತಾಗ ಒಳ್ಳೆಯ ಶಿಕ್ಷಣ ಪಡೆದುಕೊಂಡು ಜೀವನದಲ್ಲಿ ಮುನ್ನಡೆಯಲು ಸಾಧ್ಯ ಎಂದು ತಿಳಿಸಿ ಆರ್ಥಿಕವಾಗಿ ಸಹಾಯ ನೀಡಿರುವ ಕಾನಮುಸ್ಕಿ ಫೌಂಡೇಶನ್‍ಗೆ ಅಭಿನಂದನೆ ಸಲ್ಲಿಸಿದರು. ಕಾನಮುಸ್ಕಿ ಫೌಂಡೇಶನ್‍ನ ಟ್ರಸ್ಟಿ ಮಹಾದೇವ ಎಂ ಹೆಗಡೆ ಸಭಾಧ್ಯಕ್ಷತೆ ವಹಿಸಿದ್ದರು.
ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮ ಆರಂಭವಾಯಿತು. ಕಾನಮುಸ್ಕಿ ಫೌಂಡೇಶನ್‍ನ ಟ್ರಸ್ಟಿ ರಾಮಕೃಷ್ಣ ಹೆಗಡೆ ಕಾನಮುಸ್ಕಿ ಸ್ವಾಗತಿಸಿ ಫೌಂಡೇಶನ್‍ನ ಕಾರ್ಯಚಟುವಟಿಕೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಹೆಗಡೆ ಕಾನಮುಸ್ಕಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.