ಶಿರಸಿ: ಸ್ಕೊಡ್ ವೆಸ್ ಸಂಸ್ಥೆ ಶಿರಸಿಗೆ ಹೆಮ್ಮೆ ತರುವಂಥ ಕೆಲಸ ಮಾಡುತ್ತಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ಕೊಡ್ ವೆಸ್ ಶಕ್ತಿದಿವಸ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಸ್ವಯಂಸೇವಕರೆಂದರೆ ಸೈನಿಕರಿದ್ದಂತೆ. ಸ್ಕೊಡ್ ವೆಸ್ ಜನಜೀವನದಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡುತ್ತಿದೆ. ಸಂಸ್ಥೆಯಿಂದ ಶಿರಸಿಯ ಕೀರ್ತಿ ಹೆಚ್ಚಿದೆ ಎಂದು ಶ್ಲಾಘಿಸಿದರು. ರಾಜ್ಯ ಸರ್ಕಾರದ ಯೋಜನೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿರುವ ಸ್ವಯಂಸೇವಾ ಸಂಘಗಳಲ್ಲಿ ಸ್ಕೊಡ್ ವೆಸ್ ಸಂಸ್ಥೆಯೂ ಒಂದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ಶ್ರೀನಿವಾಸ್ ಹೆಬ್ಬಾರ ಮಾತನಾಡಿ, ಸಾಮಾಜಿಕ ಕೆಲಸದಲ್ಲಿ ತೊಡಗಿಕೊಂಡ ನೀವೆಲ್ಲ ಧನ್ಯರು. ಸಂಸ್ಥೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕೆಲಸ ನಿರ್ವಹಿಸುವಂತಾಗಲಿ ಎಂದು ಆಶಿಸಿದರು.
ಈ ವೇಳೆ ಸ್ಕೊಡ್ ವೆಸ್ ಸಂಸ್ಥೆಯ ನೂತನ ಮಾಸಪತ್ರಿಕೆ “ವಿಕಾಸ ಪಥ” ಬಿಡುಗಡೆಗೊಳಿಸಲಾಯಿತು. ಉತ್ತಮ ಕೆಲಸ ನಿರ್ವಹಿಸಿದ ಸಂಸ್ಥೆಯ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ವೆಂಕಟೇಶ ನಾಯ್ಕ ಸ್ವಾಗತಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಕುಮಾರ್ ವಿ ಖುರ್ಸೆ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ್, ನಿವೃತ್ತ ಪ್ರಾಧ್ಯಾಪಕ ಕೆ.ಎನ್ ಹೊಸಮನಿ, ದಯಾನಂದ ಅಗಾಸಿ, ಸದಸ್ಯರಾದ ಜೂಲಿಯಾನ ಎನ್ ಫರ್ನಾಂಡಿಸ್, ವಸಂತ, ಲಲಿತಾ, ಕಾರ್ಯದರ್ಶಿ ಸರಸ್ವತಿ ಇದ್ದರು. ಕಾರ್ಯಕ್ರಮದ ಪ್ರಯುಕ್ತ ಸ್ವಸಹಾಯ ಸಂಘದ ಸದಸ್ಯರು ತಯಾರಿಸಿದ ಗೃಹ ಉತ್ಪನ್ನಗಳನ್ನು ಪ್ರದರ್ಶಿಸಲಾಯಿತು.