ಕುಮಟಾ: ಗ್ರಾಮ ಸ್ವರಾಜ್ ಪರಿಕಲ್ಪನೆ ಬಲಿಷ್ಠಗೊಂಡಾಗ ದೇಶದ ಅಭಿವೃದ್ಧಿ ಸಾಧ್ಯ. ಆ ನಿಟ್ಟಿನಲ್ಲಿ ಕಾಂಗ್ರೆಸ್ ಒಂದು ತಿಂಗಳು ಗ್ರಾ.ಪಂ ವ್ಯಾಪ್ತಿಯ ಬೂತ್ ಮಟ್ಟದಲ್ಲಿ ಪ್ರತಿ ಮನೆಗಳಿಗೆ ತೆರಳಿ, ಕಾಂಗ್ರೆಸ್ ಪಕ್ಷವನ್ನು ಸಂಘಟಿಸಲಾಗುತ್ತದೆ ಎಂದು ಮಾಜಿ ಶಾಸಕಿ ಶಾರದಾ ಶೆಟ್ಟಿ ಹೇಳಿದರು.
ಅವರು ಶನಿವಾರ ಕುಮಟಾ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಹಾತ್ಮಾ ಗಾಂಧಿಜೀ, ಲಾಲ್ ಬಹದ್ದೂರ ಶಾಸ್ತ್ರೀ ಜನ್ಮ ದಿನಾಚರಣೆ ಹಾಗೂ ಗ್ರಾಮ್ ಸ್ವರಾಜ್ಯ ಸಮಾವೇಶವನ್ನು ಉದ್ಘಾಟಿಸಿ, ಗಣ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದು ಮಾತನಾಡಿದರು.
ಶಿಕ್ಷಣ ಆರೋಗ್ಯ ಸೇರಿದಂತೆ ಮೂಲಭೂತ ಸೌಕರ್ಯಗಳು ಗ್ರಾಮ ಮಟ್ಟದಲ್ಲಿ ಸಿಗಬೇಕು ಎಂದು ಗಾಂಧಿಜೀ ಪ್ರತಿಪಾದಿಸಿದ್ದರು. ಆ ಮೂಲಕ ಪಂಚಾಯತಕ್ಕೆ ಪರಮಾಧಿಕಾರ ನೀಡಿ, ಆ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯಾಗಬೇಕೆಂದಿದ್ದರು. ಗಾಂಧಿ ಹಾಗೂ ಶಾಸ್ತ್ರೀ ಜನಸಾಮಾನ್ಯರ ನಡುವೆ ಸಾಮಾನ್ಯರಂತೆ ಜೀವನ ಸಾಗಿಸಿ, ದೇಶದ ಅಭಿವೃದ್ಧಿಗೆ ಕಾರಣೀಭೂತರಾಗಿದ್ದರು. ಹಲವಾರು ಚಳುವಳಿ ಸಂಘಟಿಸಿ, ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾನ್ ವ್ಯಕ್ತಿ ಗಾಂಧಿ ಎಂದ ಅವರು, ಕಡಿಮೆ ಅವಧಿಯಲ್ಲಿ ಲಾಲ್ ಬಹದ್ದೂರ ಶಾಸ್ತ್ರೀ ಪ್ರಧಾನಿಯಾಗಿದ್ದರೂ ದೇಶದಲ್ಲಿ ಹಲವಾರು ಬದಲಾವಣೆ ತರುವ ಮೂಲಕ ನಮಗೆಲ್ಲರಿಗೂ ಆದರ್ಶರಾಗಿದ್ದಾರೆ ಎಂದರು.
ಕುಮಟಾ ಬ್ಲಾಕ್ ಕಾಂಗ್ರೆಸ್ ವೀಕ್ಷಕ ಯೋಗೀಶ ರಾಯ್ಕರ ಮಾತನಾಡಿ, ಗ್ರಾಮ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗುತ್ತದೆ ಎಂಬ ಕನಸು ಗಾಂಧಿಜೀ ಕಂಡಿದ್ದರು. ಅವರ ಮಾರ್ಗದರ್ಶನದಂತೆ ಗ್ರಾಮ ಸ್ವರಾಜ್ಯಕ್ಕೆ ಕಾಂಗ್ರೆಸ್ ಹೆಚ್ಚಿನ ಮಹತ್ವ ನೀಡಿದ್ದು, ರಾಜೀವ ಗಾಂಧಿ ಪ್ರಧಾನಿಯಾಗಿದ್ದಾಗ ಗ್ರಾ.ಪಂ, ತಾ.ಪಂ ಹಾಗೂ ಜಿ.ಪಂ ಚುನಾವಣೆ ಹಾಗೂ ಅಧ್ಯಕ್ಷರ ಆಯ್ಕೆಯಲ್ಲಿ ಮೀಸಲಾಯಿ ಜಾರಿಗೊಳಿಸಿ, ಪ್ರತಿಯೊಬ್ಬರಿಗೂ ಸಮಾಜ ಅಧಿಕಾರ ನೀಡಿದ್ದರು. ಆದರೆ ಈಗ ನಮ್ಮನ್ನಾಳುತ್ತಿರುವ ಸರ್ಕಾರಗಳು ಗ್ರಾಮ ಸ್ವರಾಜ್ಯ ಪರಿಕಲ್ಪನೆಗಳನ್ನು ಮೊಟಕುಗೊಳಿಸುತ್ತಿರುವುದು ವಿಷಾದನೀಯ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್.ನಾಯ್ಕ, ಪುರಸಭಾ ಮಾಜಿ ಅಧ್ಯಕ್ಷ ಮಧೂಸೂದನ ಶೇಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗೇಶ ಪಟಗಾರ, ಕಾಂಗ್ರೆಸ್ ಸೇವಾದಲದ ಜಿಲ್ಲಾಧ್ಯಕ್ಷ ಆರ್.ಎಚ್.ನಾಯ್ಕ, ಹಿರಿಯ ಮುಖಂಡ ರಾಮನಾಥ ಶಾನಭಾಗ, ಕಾಂಗ್ರೆಸ್ ತಾಲೂಕಾ ಘಟಕಾಧ್ಯಕ್ಷೆ ಸುಜಾತಾ ವಾರೇಖಾರ, ಹಿಂದುಳಿದ ಘಟಕದ ತಾಲೂಕಾಧ್ಯಕ್ಷ ಹನುಮಂತ ಪಟಗಾರ, ಅಲ್ಪ ಸಂಖ್ಯಾತ ಘಟಕದ ತಾಲೂಕಾಧ್ಯಕ್ಷ ಮುಜಾಫರ್, ಕಾಂಗ್ರೆಸ್ ಮುಖಂಡರ ರವಿಕುಮಾರ ಶೆಟ್ಟಿ, ಇತ್ತೀಚೆಗೆ ಪಕ್ಷ ಸೆರ್ಪಡೆಗೊಂಡ ಯಶೋಧರ ನಾಯ್ಕ, ಹರೀಶ ಶೇಟ್, ಜಗದೀಶ.ಡಿ.ನಾಯಕ, ತಾ.ಪಂ ಮಾಜಿ ಸದಸ್ಯೆ ಯಶೋಧಾ ಶೆಟ್ಟಿ, ಪುರಸಭಾ ಸದಸ್ಯ ಎಂ.ಟಿ.ನಾಯ್ಕ, ಪ್ರಮುಖರಾದ ಸಚಿನ ನಾಯ್ಕ, ವೀಣಾ ನಾಯಕ ತಲಗೇರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.