ಕುಮಟಾ: ಪ್ರಧಾನಿ ನರೇಂದ್ರ ಮೋದಿಯವರ 71 ನೆಯ ಜನ್ಮ ದಿನದ ನಿಮಿತ್ತ ಜಿಲ್ಲಾ ಹಾಗೂ ತಾಲೂಕಾ ಬಿಜೆಪಿ ಯುವ ಮೋರ್ಚಾದಿಂದ ಸೇವೆ ಮತ್ತು ಸಮರ್ಪಣಾ ಅಭಿಯಾನದ ಅಂಗವಾಗಿ ಜಿಲ್ಲಾ ಮಟ್ಟದ ಪಿ.ಎಂ ನಮೋ ರಸಪ್ರಶ್ನೆ ಸ್ಪರ್ಧೆಯನ್ನು ಕುಮಟಾ ಪಟ್ಟಣದ ನಾದಶ್ರೀ ಕಲಾಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸ್ಪರ್ಧೆಯಲ್ಲಿ ಆಟೋ ಚಾಲಕ ಮಂಜುನಾಥ ಗುನಗಾ ಪ್ರಥಮ, ಮಹಾಂತೇಶ ಹರಿಕಂತ್ರ ದ್ವೀತಿಯ ಹಾಗೂ ಗಜೇಂದ್ರ ಹರಿಕಂತ್ರ ತೃತೀಯ ಸ್ಥಾನ ಪಡೆದು, ತಲಾ 3, 2, 1 ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಪಡೆದರು. ತಾಲೂಕಿನ 28 ಪರೀಕ್ಷಾರ್ಥಿಗಳು ರಸಪಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಎಲ್ಲ ಸ್ಪರ್ಧಿಗಳಿಗೂ ಪ್ರಮಾಣ ಪತ್ರಗಳನ್ನು ಗಣ್ಯರು ವಿತರಿಸಿದರು.
ಸ್ಪರ್ಧಾ ವಿಜೇತರಿಗೆ ಶಾಸಕ ದಿನಕರ ಶೆಟ್ಟಿ ಬಹುಮಾನ ವಿತರಿಸಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಲಭಿಸಿ, 70 ವರ್ಷ ಪೂರೈಸಿದ್ದರೂ ಜಮ್ಮು ಮತ್ತು ಕಾಶ್ಮೀರಕ್ಕೆ ವಿಧಿಸಿದ್ದ 370 ನೇ ವಿಧಿ ರದ್ಧುಪಡಿಸಲು ಈ ಹಿಂದೆ ನಮ್ಮನ್ನಾಳಿದ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದುಗಳು ಅಲ್ಪಸಂಖ್ಯಾತರು. ಆದರೆ ಈ ಹಿಂದಿನ ಕಾಂಗ್ರೆಸ್ ಸರ್ಕಾರ ಮುಸ್ಲಿಮ್‍ರನ್ನು ಒಲೈಸಿಕೊಂಡು ದೇಶದಾದ್ಯಂತ ಅವರ ಮತಗಳನ್ನು ಪಡೆದಿವೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ದೃಢಸಂಕಲ್ಪ ಮಾಡಿ, 370 ನೇ ವಿಧಿ ರದ್ಧುಪಡಿಸಿ ಎಲ್ಲರಿಗೂ ಅನುಕೂಲ ಕಲ್ಪಿಸಿದ್ದಾರೆ ಎಂದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು 8 ವರ್ಷಗಳಾಗಿದ್ದು, ನಮ್ಮ ಸರ್ಕಾರದ ಸಾಧನೆ ತಿಳಿಸಲು ಪಕ್ಷದ ವಿವಿಧ ಮೋರ್ಚಾಗಳಿಂದ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಸರ್ಕಾರದ ಸಾಧನೆಯನ್ನು ಜನಸಾಮಾನ್ಯರಿಗೆ ತಲುಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಪ್ರತಿ ಕುಟುಂಬಕ್ಕೆ ಆರೋಗ್ಯ ಸೇವೆಗಾಗಿ 5 ಲಕ್ಷ ರೂ. ನೀಡುತ್ತಿದ್ದು, ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆಯಲ್ಲಿ 6 ಸಾವಿರದಿಂದ 12 ಸಾವಿರಕ್ಕೆ ಹಣ ಏರಿಕೆ ಮಾಡಿದೆ. ಅಲ್ಲದೇ ದೇಶದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಇದು ನಮ್ಮ ಸರ್ಕಾರಗಳ ಸಾಧನೆಯನ್ನು ಹೆಮ್ಮೆಯಿಂದ ಹೇಳಬೇಕಾಗಿದೆ ಎಂದರು.
ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಶಾಂತ ನಾಯಕ ಮಾತನಾಡಿ, ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿಸೂರ್ಯ ಸೂಚನೆಯಂತೆ ನರೇಂದ್ರ ಮೋದಿ ಜನ್ಮ ದಿನಾಚರಣೆ ನಿಮಿತ್ತ ದೇಶದಾದ್ಯಂತ ಪಿಎಂ ನಮೋ ರಸಪ್ರಶ್ನೆಯನ್ನು ಆಯೋಜಿಸಲಾಗಿದ್ದು, ನಮ್ಮ ಜಿಲ್ಲೆಯಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟು 35 ವರ್ಷದೊಳಗಿನ ಸುಮಾರು 550 ರಿಂದ 600 ಯುವಕ-ಯುವತಿಯರಿಗೆ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ ಎಂದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು 7 ವರ್ಷ ಪೂರೈಸಿ, 8 ನೆಯ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಆದರೆ ಸರ್ಕಾರದ 374 ಕ್ಕೂ ಅಧಿಕ ವಿವಿಧ ಯೋಜನೆಗಳನ್ನು ಭಾರತೀಯರಿಗೆ ನೀಡಿದ್ದು, ಈ ಎಲ್ಲ ಯೋಜನೆಗಳು ತಳಮಟ್ಟಕ್ಕೆ ಅಥವಾ ಯುವಕರನ್ನು ತಲುಪಲು ನಾವು ಎಡವಿದ್ದೆ ಎಂಬ ಕಾರಣದಿಂದ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿ, ಯುವ ಜನಾಂಗವನ್ನು ತಲುಪುವ ಕೆಲಸ ಮಾಡಲಾಗುತ್ತಿದೆ. ಇದರಿಂದ ಸುಮಾರು ಲಕ್ಷಾಂತರ ಅಥವಾ ಕೋಟ್ಯಾಂತರ ಯುವಕರನ್ನು ತಲುಪುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಬಿಜೆಪಿ ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ ಅಧ್ಯಕ್ಷತೆ ವಹಿಸಿದ್ದರು. ತಾಲೂಕಾ ಯುವ ಮೋರ್ಚಾ ಅಧ್ಯಕ್ಷ ಜಗದೀಶ ಭಟ್ಟ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ, ಪುರಸಭಾ ಅಧ್ಯಕ್ಷೆ ಮೋಹಿನಿ ಗೌಡ, ಜಿಲ್ಲಾ ಯುವ ಮೋರ್ಚಾ ಸದಸ್ಯ ಆದಿತ್ಯ ಶೇಟ್, ಹಿಂದುಳಿದ ಮೋರ್ಚಾ ತಾಲೂಕಾಧ್ಯಕ್ಷ ವಿಶ್ವನಾಥ ನಾಯ್ಕ, ಹೊಲನಗದ್ದೆ ಗ್ರಾ.ಪಂ ಸದಸ್ಯೆ ಅನುರಾಧಾ ಭಟ್ಟ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ ಹರ್ಮಲಕರ್, ಪಕ್ಷದ ಪ್ರಮುಖರಾದ ಜಯಾ ಶೇಟ್, ಪುರಸಭಾ ಸದಸ್ಯ ತುಳುಸು ಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಬೆಳಿಗ್ಗೆ ರಸಪ್ರಶ್ನೆ ಸ್ಪರ್ಧೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಉದ್ಘಾಟಿಸಿದ್ದು, ಹೊನ್ನಾವರ ಮಂಡಲಾಧ್ಯಕ್ಷ ರಾಜು ಭಂಡಾರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಶುಭ ಹಾರೈಸಿದರು.