ಶಿರಸಿ: ಹಿರಿಯ ಪತ್ರಕರ್ತ, ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರಿಗೆ ಚಿತ್ರದುರ್ಗದ ಬ್ರಹನ್ಮಠ ನೀಡುವ ಮುರುಘಾ ಶ್ರೀ ಪ್ರಶಸ್ತಿ ಪ್ರಕಟವಾಗಿದೆ.
ಉತ್ತರ ಕನ್ನಡದ ಸಿದ್ದಾಪುರ ಮೂಲದ ರವೀಂದ್ರ ಭಟ್ಟ ಅವರು ತಮ್ಮ ಬರಹಗಳ ಮೂಲಕ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಾದವರು. ಸಂಯುಕ್ತ ಕರ್ನಾಟಕ ಸೇರಿದಂತೆ ಹಲವು ಪತ್ರಿಕೆಯಲ್ಲಿ ಕೆಲಸ ಮಾಡಿ ಕಳೆದ ಎರಡು ದಶಕಗಳಿಗೂ ಅಧಿಕ ಕಾಲದಿಂದ ಪ್ರಜಾವಾಣಿಯ ವಿವಿಧ ಸ್ತರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇವರೇ ಬರ ಮಾಡಿಕೊಂಡ ಬರ, ಸಂಪನ್ನರು, ಅಕ್ಷಯ ನೇತ್ರ, ಸಹಸ್ರಪದಿ, ಮೂರನೇ ಕಿವಿ ಸೇರಿದಂತೆ ಇದುವರೆಗೆ ಒಟ್ಟು 10ಪುಸ್ತಕಗಳನ್ನು ಬರೆದಿದ್ದಾರೆ. ಇವರು ಬರೆದ ಮೂರನೇ ಕಿವಿ ಪುಸ್ತಕ ಮರಾಠಿ, ಹಿಂದಿ, ಇಂಗ್ಲಿಷ್ ಮಲಯಾಳಂ ಸೇರಿದಂತೆ ಹಲವಾರು ಭಾಷೆಗಳಿಗೆ ಅನುವಾದಗೊಂಡಿದೆ. ಪ್ರಜಾವಾಣಿಯ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ ಇವರು ದಾವಣಗೆರೆ, ಮೈಸೂರು ಜಿಲ್ಲಾ ವರದಿಗಾರರಾಗಿ ನಂತರ ಮೈಸೂರು ಬ್ಯೂರೋ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ ಅನುಭವ ಇವರದ್ದಾಗಿದೆ.
ಮಾನವೀಯ ವರದಿಗಳು, ಅಭುವೃದ್ಧಿ ಲೇಖನಗಳು, ಪರಿಸರ ಕುರಿತು ಅನೇಕ ಲೇಖನಗಳನ್ನು ಬರೆದಿದ್ದಾರೆ.ಇತ್ತೀಚೆಗೆ ಅಪರೂಪವಾಗಿರುವ ತನಿಖಾವರದಿಗಳಾದ ಕೆಪಿಎಸ್ ಸಿ ಕುರಿತು, ವಿಶ್ವವಿದ್ಯಾನಿಲಯಗಳ ಕರ್ಮಕಾಂಡ ಮುಂತಾದ ತನಿಖಾ ವರದಿಗಳು ಅಲ್ಲಿ ನಡೆಯುವ ಭ್ರಷ್ಟಾಚಾರಗಳ ಕುರಿತು ಬೆಳಕು ಚೆಲ್ಲುವಂಥದ್ದು ಎಂಬುದು ಉಲ್ಲೇಖನೀಯ.
3 ಬಾರಿ ಕೆಯುಡಬ್ಲುಜೆ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಚರಕ ಪ್ರಶಸ್ತಿ, ಎಚ್ ಎಸ್ ಕೆ ಪ್ರಶಸ್ತಿ, ಕೆಂಪೆಗೌಡ ಪ್ರಶಸ್ತಿ, ಕರ್ನಾಟಕ ಸರಕಾರ ನೀಡುವ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ಮೈಸೂರು ಪತ್ರಕರ್ತರ ಸಂಘ ಕೊಡಮಾಡುವ ಪ್ರಶಸ್ತಿ, ಮಹಾತ್ಮಾ ಗಾಂಧಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇದೀಗ ಮುರುಘಾ ಮಠ ನೀಡುವ ಮುರುಘಾ ಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಅಭಿನಂದನೆ: ರವೀಂದ್ರ ಭಟ್ಟ ಅವರನ್ನು ಮುರುಘಾ ಶ್ರೀ ಪ್ರಶಸ್ತಿಗೆ ಆಯ್ಕೆ ಆಗಿದ್ದು ಅರ್ಹತೆಗೆ ಸಂದ ಗೌರವ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಣಿ ಸದಸ್ಯ ಜಿ.ಸುಬ್ರಾಯ ಭಟ್ಟ ಬಕ್ಕಳ, ವಿಶ್ವಶಾಂತಿ ಸೇವಾ ಟ್ರಸ್ಟ ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ, ಅನಂತ ಯಕ್ಷಕಲಾ ಪ್ರತಿಷ್ಠಾನದ ಕಾರ್ಯದರ್ಶಿ ಕೇಶವ ಹೆಗಡೆ ಕೊಳಗಿ ಸೇರಿದಂತೆ ಇತರರು ಅಭಿನಂದಿಸಿದ್ದಾರೆ.