ಶಿರಸಿ : ಉಡುಪಿಯ ಅಷ್ಟಮಠಗಳಲ್ಲೊಂದಾರ ಶಿರೂರು ಮಠಕ್ಕೆ ಉತ್ತರಾಧಿಕಾರಿಯ ನೇಮಕ ಪ್ರಶ್ನಿಸಿ ಹೈಕೋರ್ಟಗೆ ಸಲ್ಲಿಸಲಾಗಿದ್ದ ಅರ್ಜಿ ತಿರಸ್ಕೃತಗೊಂಡಿರುವುದು ಸತ್ಯಕ್ಕೆ ಸಂದ ಜಯ ಎಂದು ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ದ್ವಂದ್ವ ಮಠಾಧೀಶರ ನೆಲೆಯಲ್ಲಿ ಶಿರೂರು ಮಠದ ಆಡಳಿತವನ್ನು ಎರಡು ಮುಕ್ಕಾಲು ವರ್ಷ ಕಾಲ ನಿರ್ವಹಿಸಿ ಕಳೆದ ಮೇ ತಿಂಗಳಲ್ಲಿ ಶಿರೂರು ಮೂಲಮಠಕ್ಕೆ ಶ್ರೀ ವೇದವರ್ಧನ ತೀರ್ಥರನ್ನು ಮಠಾಧಿಪತಿಯನ್ನಾಗಿ ನೇಮಿಸಲಾಗಿತ್ತು. ಇದನ್ನು ಪ್ರಶ್ನಿಸಿ ಕೆಲವರು ಹೈಕೋರ್ಟಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ನ್ಯಾಯಾಲಯ ಅರ್ಜಿಯನ್ನು ಸುದೀರ್ಘವಾಗಿ ವಿಮರ್ಶಿಸಿ ಅರ್ಜಿ ತಿರಸ್ಕೃತಗೊಂಡಿರುವುದು ನ್ಯಾಯಕ್ಕೆ ಸಿಕ್ಕ ಜಯವಾಗಿದೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. 800 ವರ್ಷಗಳಿಂದ ನಡೆದುಬಂದಿರುವ ಹಾಗೂ ಮೂಲಗುರು ಮಧ್ವಾಚಾರ್ಯರು ಹಾಕಿಕೊಟ್ಟ ಸಂಪ್ರದಾಯಕ್ಕೆ ನ್ಯಾಯಪೀಠ ಮುದ್ರೆ ಒತ್ತಿರುವುದು ಅತೀವ ಸಂತೋಷ ತಂದಿದೆ ಎಂದು ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದ್ದಾರೆ.