ಕಾರವಾರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಅ.2ರ ಗಾಂಧಿ ದಿನಾಚರಣೆ ದಿನದಿಂದ ನ.14 ರ ಮಕ್ಕಳ ದಿನಾಚರಣೆಯರೆಗೂ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ವರ್ಷಾಚರಣೆಯ ಅಂಗವಾಗಿ ಜಿಲ್ಲೆಯಾದ್ಯಂತ ಕಾನೂನು ಅರಿವು ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷಕುಮಾರ ಶೆಟ್ಟಿ ಎನ್ ತಿಳಿಸಿದ್ದಾರೆ.
ಜಿಲ್ಲಾಡಳಿತ, ಗೃಹ ಇಲಾಖೆ, ಜಿಲ್ಲಾ ಮತ್ತು ತಾಲೂಕು ಪಂಚಾಯತ್, ಆರೋಗ್ಯ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ ಹಾಗೂ ಜಾಥಾ ನಡೆಯಲಿವೆ. ಈ ಕಾರ್ಯಕ್ರಮದ ಮೂಲ ಉದ್ದೇಶ ಜನರಿಗೆ ಕಾನೂನಿನ ಬಗ್ಗೆ ತಿಳುವಳಿಕೆ ನೀಡುವುದಲ್ಲದೇ, ದೈನಂದಿನ ಜೀವನದಲ್ಲಿ ತೀರಾ ಉಪಯುಕ್ತವಾದ ಕಾಯ್ದೆಯ ಬಗ್ಗೆ ಮಾಹಿತಿ ನೀಡಿ ಜನರ ಹಕ್ಕಿನ ಬಗ್ಗೆ ಜಾಗೃತಿಯನ್ನು ಮೂಡಿಸಲಾಗುವುದು. ಪ್ರತಿ ವ್ಯಕ್ತಿಯ ವಯಕ್ತಿಕ ಸಮಸ್ಯೆಗಳು ಭಿನ್ನವಾಗಿರುವಂತೆ, ಬೇರೆ-ಬೇರೆ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಜನರ ಸಮಸ್ಯೆಗಳು ಕೂಡ ವಿಭಿನ್ನವಾಗಿದೆ. ಹಾಗಾಗಿ ಆಯಾ ಪ್ರದೇಶದ ಜನರ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಂಡು ಕಾನೂನು ಮಾಹಿತಿಯನ್ನು ನೀಡುವುದರ ಜೊತೆಯಲ್ಲಿ ಪಡಿತರ ಚೀಟಿ ಪಡೆದುಕೊಳ್ಳುವಿಕೆ, ವೃದ್ಧಾಪ್ಯ ವೇತನ, ವಿಕಲ ಚೇತನರಿಗೆ ನೀಡುವ ಮಾಸಾಶನ ಹೀಗೆ ಜನರ ಹತ್ತು ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲು ಈ ಕಾರ್ಯಕ್ರಮದಲ್ಲಿ ಪ್ರಯತ್ನಿಸಲಾಗುವುದು.
ನ್ಯಾಯಾಧೀಶರು, ವಕೀಲರು, ಪ್ಯಾನಲ್ ವಕೀಲರು, ಕಾನೂನು ಸ್ವಯಂ ಸೇವಕರು, ವಿವಿಧ ಇಲಾಖೆಯ ಅಧಿಕಾರಿಗಳು, ಆಯ್ದ ಕಾನೂನು ಅರಿವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡುವವರಿದ್ದಾರೆ.ವಿದ್ಯಾರ್ಥಿಗಳು, ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಹಾಗೂ ಇನ್ನಿತರ ಸಂಘಟನೆಗಳ ಸಹಾಯ ಸಹಕಾರವನ್ನು ಬಳಸಿಕೊಂಡು ಪ್ರತಿಯೊಬ್ಬರಿಗೂ ಕಾನೂನಿನ ಬಗ್ಗೆ ಅರಿವನ್ನು ಮೂಡಿಸಿ ಜಾಗೃತ ಗೊಳಿಸುವುದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಉದ್ದೇಶವಾಗಿದೆ. ಈ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಸರ್ವರು ಸಹಕರಿಸಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷಕುಮಾರ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.