ಶಿರಸಿ: ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಪದವಿಯನ್ನು ಪಡೆಯುತ್ತಾರೆ. ಅವರಲ್ಲಿ ಕೆಲವರಿಗೆ ಮಾತ್ರ ಉದ್ಯೋಗ ದೊರೆಯುತ್ತದೆ. ಕೆಲವರು ಏನು ಮಾಡಬೇಕು ಎಂಬ ಗೊಂದಲದಲ್ಲಿದ್ದರೆ, ಮತ್ತೆ ಕೆಲವರು ಮನೆಯಲ್ಲಿಯೇ ಇರುತ್ತಾರೆ. ಇಂತವರಿಗೆ ಕೌಶಲ್ಯ ಅಭಿವೃದ್ಧಿ ಮಾಡಿಕೊಳ್ಳುವ ಅಗತ್ಯತೆ ಇದ್ದು ದೇಶಪಾಂಡೆ ಸ್ಕಿಲ್ಲಿಂಗ್ ತರಬೇತಿ ನೀಡುವ ಕಾರ್ಯ ಮಾಡುತ್ತದೆ ಎಂದು ದೇಶಪಾಂಡೆ ಸ್ಕಿಲ್ಲಿಂಗ್’ನ ಜಿಲ್ಲಾ ಮುಖ್ಯಸ್ಥ ಶ್ರೀನಿವಾಸ್ ನಾಯ್ಕ ಹೇಳಿದರು.
ಅವರು ಎಂಇಎಸ್ ನ ಎಂ.ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ದೇಶಪಾಂಡೆ ಸ್ಕಿಲ್ಲಿಂಗ್ ಸಹಯೋಗದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ತರಬೇತಿ ಮತ್ತು ಉದ್ಯೋಗಾವಕಾಶ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಇದೆ, ಆದರೆ ಸ್ಪರ್ಧಾತ್ಮಕ ಪರೀಕ್ಷೆ ಗಳನ್ನು ತೆಗೆದುಕೊಳ್ಳುವ ಮನಸ್ಸಿರುವವರ ಕೊರತೆ ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಉಪಸಮಿತಿ ಸದಸ್ಯ ಲೋಕೇಶ್ ಹೆಗಡೆ ಮಾತನಾಡಿ ಪ್ರತಿಯೊಬ್ಬರಿಗೂ ಪದವಿ ನಂತರ ಏನು ಎಂಬ ಪ್ರಶ್ನೆ ಇರುತ್ತದೆ ಅದಕ್ಕೆ ಉತ್ತರ ಈ ಸಂಸ್ಥೆ ನೀಡುತ್ತದೆ. ಈ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಕೌಶಲ್ಯ ವೃದ್ಧಿಸಿಕೊಳ್ಳಿ ಎಂದರು.
ಪ್ರಾಚಾರ್ಯೆ ಡಾ.ಕೋಮಲಾ ಭಟ್ ಸ್ವಾಗತಿಸಿ ಪ್ರಾಸ್ತಾವಿಸಿ ಜೈ ಶ್ರೀ ಮತ್ತು ಗುರುರಾಜ್ ‘ದೇಶ’ ದೇಶಪಾಂಡೆ ಸ್ಥಾಪಿಸಿದ ದೇಶಪಾಂಡೆ ಫೌಂಡೇಶನ್, ನಾವೀನ್ಯತೆಯ ಮೂಲಕ ಸಮರ್ಥನೀಯ ಸೇವಾ ಕಾರ್ಯ ಮತ್ತು ಅದು ಸಾಮಾಜಿಕ ಮತ್ತು ಆರ್ಥಿಕ ಪರಿಣಾಮವನ್ನು ಬೆಂಬಲಿಸಿದೆ. ಅದಲ್ಲದೇ ದೇಶಪಾಂಡೆ ಫೌಂಡೇಶನ್‍ನ ಉದ್ದೇಶವು ಸ್ಥಳೀಯ ಪರಿಸರ ವ್ಯವಸ್ಥೆಗಳನ್ನು ಬಲಪಡಿಸುವುದು, ನಾಯಕರು ಮತ್ತು ಉದ್ಯಮಿಗಳನ್ನು ನಿರ್ಮಿಸುವುದು, ಮತ್ತು ಗಮನಾರ್ಹವಾದ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮವನ್ನು ಹೊಂದಿರುವ ಸುಸ್ಥಿರ, ಉದ್ಯಮಗಳ ಸೃಷ್ಟಿಯನ್ನು ವೇಗಗೊಳಿಸಲು ನವೀನ ಚಿಂತನೆಯನ್ನು ವೇಗ ವರ್ಧಿಸುವುದು. ಮುಂದಿನ ಪೀಳಿಗೆಯ ಉದ್ಯಮಿಗಳು, ನಾಯಕರು ಮತ್ತು ಸಂಸ್ಥೆಗಳನ್ನು ಬೆಳೆಸಲು ಸಹಾಯವಾಗುವಂತದ್ದು. ಈ ಹಿನ್ನೆಲೆಯಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳ ಮುಂದಿನ ಬದುಕನ್ನು ರೂಪಿಸಲು ಈ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಲಾಭ ನಮ್ಮ ವಿದ್ಯಾರ್ಥಿಗಳಿಗೆ ಲಭಿಸುವಂತಾಗಬೇಕು ಎಂಬ ಸದುದ್ದೇಶದಿಂದ ಇದನ್ನು ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ 100 ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡು ತರಬೇತಿ ಕುರಿತು ಮಾರ್ಗದರ್ಶನ ಪಡೆದರು. ಪ್ರೊ.ಸತೀಶ್ ನಿರೂಪಿಸಿ ವಂದಿಸಿದರು.