ದೆಹಲಿ: ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಬುಡಕಟ್ಟು ಆಯೋಗ ಆಯೋಜಿಸಿರುವ ಸಂವಾದ ಕಾರ್ಯಕ್ರಮದ 3 ನೇ ದಿನ ಹಾಗೂ ಅಂತಿಮ ದಿನದಲ್ಲಿ ವಿಧಾನ ಪರಿಷತ ಸದಸ್ಯ ಶಾಂತಾರಾಮ ಸಿದ್ದಿ ಭಾಗಿಯಾಗಿ ಬುಡಕಟ್ಟು ಜನರ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ, ಸೂಚನೆಗಳನ್ನು ನೀಡಿದರು.
ರಾಜ್ಯದಲ್ಲಿರುವ ಬುಡಕಟ್ಟು ಜನರಿಗೆ ಈವರೆಗೆ ಕೇವಲ 25% ರಷ್ಟು ಮಾತ್ರ ಹಕ್ಕುಪತ್ರ ಸಿಕ್ಕಿದ್ದು ಇನ್ನುಳಿದವರಿಗೂ ಆದಷ್ಟು ಬೇಗ ಸಿಗಬೇಕು. ಜೊತೆಗೆ ನೀಡಿರುವ ಹಕ್ಕುಪತ್ರಗಳಲ್ಲಿ ವಾಸಕ್ಕೆ ಹಾಗೂ ಕೃಷಿಗೂ ಎಂದು ಸಮೂದಿಸಬೇಕು. ದನಗರ ಗೌಳಿ,ಕುಣಬಿ ಹಾಲಕ್ಕಿ ಒಕ್ಕಲಿಗ ಮುಂತಾದ ಪಾರಂಪರಿಕ ಅರಣ್ಯವಾಸಿಗಳು ಸುಮಾರು 100 ಕ್ಕಿಂತ ಹೆಚ್ಚು ವರ್ಷಗಳಿಂದ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದು ಅವರಿಗೂ ಹಕ್ಕುಪತ್ರ ನೀಡಬೇಕು ಎಂದು ಹೇಳಿದರು.
ಈಗಾಗಲೆ ನೀಡಿರುವ ಹಕ್ಕುಪತ್ರಗಳು ಕೂಡ ಸಾಗುವಳಿ ಮಾಡುವ ಪೂರ್ತಿ ಜಾಗಕ್ಕೆ ನೀಡಿರುವುದಿಲ್ಲ, ಅದನ್ನು ಪೂರ್ತಿಯಾಗಿ ನೀಡಿ, ಆರ್‍ಟಿಸಿ ಯನ್ನು ನೀಡಬೇಕು. ಅರಣ್ಯ ಇಲಾಖೆ, ಕಂದಾಯ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸದಿದ್ದರೆ ಬುಡಕಟ್ಟು ಜನರು ಅಭಿವೃದ್ಧಿ ಸಾಧಿಸುವುದು ಕಷ್ಟ ಎಂದರು.
ಕರ್ನಾಟಕ ರಾಜ್ಯದಲ್ಲಿ ದೇಶದ ಇನ್ನುಳಿದ ರಾಜ್ಯಕ್ಕಿಂತ ಅತೀ ಹೆಚ್ಚು ಅರಣ್ಯ ಕಾನೂನು ಇರುವುದರಿಂದ ಬುಡಕಟ್ಟು ಜನರ ಮೇಲೆ ತುಂಬಾ ಪರಿಣಾಮ ಬೀರುತ್ತಿದೆ. ಬುಡಕಟ್ಟು ಜನರ ಜೀವನಕ್ಕೆ ತೊಂದರೆ ಆಗದೆ ಇರುವಂತೆ ಕಾನೂನನ್ನು ಸಡಿಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಭಾಜಪ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಜಿ, ಕೇಂದ್ರ ಬುಡಕಟ್ಟು ಸಚಿವ ಅರ್ಜುನ ಮುಂಡಾ, ಕೇಂದ್ರ ಸಚಿವ ನಾರಾಯಣ ಸ್ವಾಮಿ, ಕೇಂದ್ರ ಆರೋಗ್ಯ ಮತ್ಯು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಸಚಿವ ಭಾರತಿ ಪವಾರ, ಬುಡಕಟ್ಟು ಆಯೋಗದ ಅಧ್ಯಕ್ಷ ಹರ್ಷ ಚವ್ಹಾಣ, ಬುಡಕಟ್ಟು ಆಯೋಗದ ಕಾರ್ಯದರ್ಶಿ ಅಲ್ಕಾ ತಿವಾರಿ, ಭಾಜಪ ರಾಷ್ಟ್ರೀಯ ಪದಾಧಿಕಾರಿಗಳು, ರಾಜ್ಯ ಸಭಾ ಮತ್ತು ಲೋಕ ಸಭಾ ಸದಸ್ಯರು, ಬುಡಕಟ್ಟು ಆಯೋಗದ ಸದಸ್ಯರು ಹಾಗೂ ಇನ್ನಿತರ ಪದಾಧಿಕಾರಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.