ಗೋಕರ್ಣ: ಇಲ್ಲಿನ ಬೆಲೆಕಾನಿನ ಶ್ರೀಧರ ಅನಂತ ನಾಯ್ಕ ಎಂಬವರ ಅಂಗಡಿಯಲ್ಲಿ ಕಳ್ಳತನ ಮಾಡಿ, ಅಲ್ಲಿದ್ದ 10 ಲಕ್ಷ ರೂಪಾಯಿ ನಗದು ದೋಚಿ ಪರಾರಿಯಾದ ಘಟನೆ ನಡೆದಿದೆ.
ಅಂಗಡಿ ಮಾಲಿಕ ಜಾಗ ಮಾರಿದ ಹಣವನ್ನು ಹಲವು ದಿನಗಳಿಂದ ತನ್ನ ಅಂಗಡಿಯಲ್ಲಿ ಇಟ್ಟುಕೊಂಡಿದ್ದ ಎಂದು ತಿಳಿದು ಬಂದಿದೆ. ಪರಿಚಯಸ್ಥರೇ ಈ ಕೃತ್ಯ ಎಸಗಿದ್ದಾರೆ ಎಂಬ ಗುಮಾನಿ ಎದ್ದಿದೆ. ಅಂಗಡಿಯ ವ್ಯವಹಾರ ಮಾಡಿದ ಹಣವನ್ನು ಮುಟ್ಟದೆ, ಒಂದೇ ಕಡೆ ಇಟ್ಟ 10 ಲಕ್ಷ ರೂಪಾಯಿಯನ್ನು ಮಾತ್ರ, ಯಾವುದೇ ಹುಡುಕಾಟ ನಡೆಸದೆ ಕದ್ದೊಯ್ದಿದ್ದಾರೆ. ಇದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಅಲ್ಲದೆ, ಪರಿಚಯಸ್ಥರೇ ಅಥವಾ ಹಣವನ್ನು ಇಟ್ಟಿರುವುದನ್ನು ಚೆನ್ನಾಗಿ ಅರಿತ ಯಾರೋ ಈ ಕೆಲಸ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಅಂಗಡಿಯ ಬೀಗ ಒಡೆದು ಬೀಗ ಹೊತ್ತೊಯ್ದ ಕಳ್ಳರು, ಮತ್ತೆಲ್ಲೂ ಜಾಲಾಡದೆ ಕೇವಲ ಹಣ ಎಲ್ಲಿ ಇದೆಯೋ ಅಲ್ಲಿಂದ ತೆಗೆದುಕೊಂಡು ಹೋಗಿದ್ದಾರೆ. ಘಟನಾ ಸ್ಥಳಕ್ಕೆ ಪಿ. ಎಸ್.ಐ. ನವೀನ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಚರುಕುಗೊಳಿಸಿದ್ದಾರೆ. ಶ್ವಾನದಳ ಆಗಮಿಸಿ ಪರಿಶೀಲನೆ ಮಾಡಿದೆ.