ಯಲ್ಲಾಪುರ : ವಿಕಲ ಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯವತಿಯಿಂದ ಅಂಗವಿಕಲರಿಗೆ ದ್ವಿಚಕ್ರವಾಹನಗಳನ್ನು ನೀಡಲಾಗುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರು ತಮ್ಮ ಕ್ಷೇತ್ರದ ಯಲ್ಲಾಪುರ, ಮುಂಡಗೋಡ ತಾಲೂಕಿನ ಅಂಗವಿಕಲರಿಗಾಗಿ 10 ಹೆಚ್ಚುವರಿ ದ್ವಿಚಕ್ರವಾಹನ ತರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ತಲಾ 86, 885 ರು. ಮೌಲ್ಯದ ಒಟ್ಟು 40 ದ್ವಿಚಕ್ರವಾಹನಗಳು ಜಿಲ್ಲೆಗೆ ಆಗಮಿಸಿದೆ.
ಇನ್ನು ಒಂದೆರೆಡು ದಿನಗಳಲ್ಲಿ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರು ಈ ದ್ವಿಚಕ್ರವಾಹನಗಳನ್ನು ಅರ್ಹ ಅಂಗವಿಕಲ ಫಲಾನುಭವಿಗಳಿಗೆ ವಿತರಿಸಲಿದ್ದಾರೆ. ದ್ವಿಚಕ್ರ ವಾಹನ ಪಡೆಯುವ ಅಂಗವಿಕಲರಲ್ಲಿ 28 ಪುರುಷರು ಹಾಗೂ 12 ಮಹಿಳೆಯರಿದ್ದಾರೆ. ದ್ವಿಚಕ್ರ ವಾಹನ ಪಡೆದುಕೊಳ್ಳುತ್ತಿರುವವರಲ್ಲಿ ಮುಂಡಗೋಡದ 10, ಯಲ್ಲಾಪುರದ 7, ಕಾರವಾರದ 6, ಅಂಕೋಲಾದ 4, ಕುಮಟಾದ 4, ಹೊನ್ನಾವರದ 1, ಭಟ್ಕಳದ 2, ಶಿರಸಿಯ 2, ಸಿದ್ದಾಪುರದ 1, ಹಳಿಯಾಳದ 1, ಜೋಯಿಡಾದ 2 ಫಲಾನುಭವಿಗಳಿದ್ದಾರೆ.
ಜಿಲ್ಲಾ ಪಂಚಾಯತ್ ಸಿಇಓ ಪ್ರಿಯಾಂಗ ಎಂ. ಅವರ ಅಧ್ಯಕ್ಷತೆಯಲ್ಲಿ ಆರ್‌ಟಿಓ, ಜಿಲ್ಲಾ ಸರ್ಜನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರು, ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ, ಎನ್‌ಜಿಓಗಳಿದ್ದ ಸಮಿತಿ ದ್ವಿಚಕ್ರ ವಾಹನ ವಿತರಣೆಗೆ ಅರ್ಹ ಅಂಗವಿಕಲ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದಾರೆ. 86, 885 ರು. ಮೌಲ್ಯದ, ಅಂಗವಿಕಲರಿಗಾಗಿ ವಿನ್ಯಾಸಗೊಳಿಸಿದ 40 ದ್ವಿಚಕ್ರವಾಹನಗಳನ್ನು ಹುಬ್ಬಳ್ಳಿಯ ಸಂಸ್ಥೆಯೊoದು ಪೂರೈಸಿದೆ. ಶೇ. 75 ಕ್ಕಿಂತ ಅಧಿಕ ಅಂಗವಿಕಲತೆ ಹೊಂದಿರುವ 20 ರಿಂದ 60 ವಯೋಮಾನದ ಅಂಗವಿಕಲರಿಗೆ ದ್ವಿಚಕ್ರ ವಾಹನ ನೀಡಲು ಫಲಾನುಭವಿಗಳನ್ನಾಗಿ ಆಯ್ಕೆ ಮಾಡಲಾಗಿದೆ.