ಹಳಿಯಾಳ : ತಾಲೂಕಿನ ತಟ್ಟಿಹಳ್ಳ ಡ್ಯಾಮಿನ ಹಿನ್ನೀರಿನ ಪ್ರದೇಶವಾದ ತಟ್ಟಿಗೇರಿ ಶಾಖೆಯ ಮಾಚಾಪುರ ಹಾಗೂ ಬೋಗುರ ಭಾಗಗಳಲ್ಲಿ 132. 33 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಳ್ಳಲು ಸಹಾಯ ಕಲ್ಪಿಸಿದ ಅರಣ್ಯ ಇಲಾಖೆಯ ಓರ್ವ ಅಧಿಕಾರಿ ಮತ್ತು ಇಬ್ಬರು ಸಿಬ್ಬಂದಿಗಳನ್ನು ಕೆನರಾ ವೃತ್ತದ ಶಿಸ್ತು ಪ್ರಾಧಿಕಾರ ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ ಯತೀಶಕುಮಾರ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ತಟ್ಟಿಗೇರಿ ಶಾಖಾ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಉಪ ವಲಯ ಅರಣ್ಯಾಧಿಕಾರಿ ಪ್ರಕಾಶ ಕಂಬಾರ, ಅರಣ್ಯ ರಕ್ಷಕ ಹೈದರಲ್ಲಿ ತಂಬೋಲಿ ಹಾಗೂ ಭಾವತೀಸ ರೊಡ್ರಿಗಸ್ ಅಮಾನತುಗೊಂಡವರಾಗಿದ್ದಾರೆ.2017 ರಿಂದ 2020 ರ ಅವಧಿಯಲ್ಲಿ ಅರಣ್ಯ ಅತಿಕ್ರಮಣ ಹಾಗೂ ಭಾರಿ ಪ್ರಮಾಣದಲ್ಲಿ ಮರತಲೆ ಕಡೆಗಳಿಗೆ ಪ್ರೋತ್ಸಾಹಿಸಿಅರಣ್ಯವನ್ನು ರಕ್ಷಿಸಲು ವಿಫಲವಾದ ಕಾರಣ ಮೂರು ಸಿಬ್ಬಂದಿಗಳನ್ನು ಅಮಾನತ್ತು ಮಾಡಲಾಗಿದೆ.
ಈ ಕುರಿತು ತನಿಖೆಯನ್ನು ಕೈಗೊಂಡ ಭಾಗವತಿ ವಲಯ ಅರಣ್ಯ ಅಧಿಕಾರಿ ಮತ್ತು ಹಳಿಯಾಳ ವಿಭಾಗದ ಸಹಾಯಕ ಸಂರಕ್ಷಣಾಧಿಕಾರಿಗಳು ಮಾಚಾಪುರ ಅರಣ್ಯ ಭಾಗದಲ್ಲಿ 82. 34 ಹಾಗೂ ಭೋಗುರ ಅರಣ್ಯ ಪ್ರದೇಶದಲ್ಲಿ 49. 69 ಹೆಕ್ಟೇರ್ ಅರಣ್ಯ ಪ್ರದೇಶವು ಅತಿಕ್ರಮಣವಾಗಿದ್ದು ಅರಣ್ಯ ಅತಿಕ್ರಮಣವಾದ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉಪ ವಲಯ ಅರಣ್ಯಾಧಿಕಾರಿ ಪ್ರಕಾಶ ಕಂಬಾರ ಹಾಗೂ ಮಾಚಾಪುರ ಭಾಗದ ಗಸ್ತಿನಲ್ಲಿದ್ದ ಭಾವತೀಸ ರೊಡ್ರಿಗಸ್ ಮತ್ತು ಭೋಗುರ ಭಾಗದ ಅರಣ್ಯ ಪ್ರದೇಶದಲ್ಲಿ ಗಸ್ತಿನಲ್ಲಿದ್ದ ಹೈದರಲ್ಲಿ ತಂಬೋಲಿ ಅತಿಕ್ರಮಣದಾರರಿಗೆ ನೇರವಾಗಿ ಸಹಕರಿಸಿ ಅಪಾರ ಪ್ರಮಾಣದ ಅರಣ್ಯ ನಾಶಕ್ಕೆ ಕಾರಣರಾಗಿದ್ದಾರೆ ಹಾಗೂ ಅರಣ್ಯ ಅತಿಕ್ರಮಣ ವಾದ ಪ್ರದೇಶಗಳಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲು ಸಹಕರಿಸಿ ಕರ್ತವ್ಯಲೋಪ ಎಸಗಿದ್ದಾರೆ. ಅಷ್ಟೇ ಅಲ್ಲದೆ ಮಾಚಾಪುರ ಮತ್ತು ಭೋಗುರ ಪ್ರದೇಶಗಳಲ್ಲಿ ಸ್ವೀಕೃತವಾದ ಅರಣ್ಯ ಹಕ್ಕು ಅರ್ಜಿಗಳನ್ನು ಕಂದಾಯ ಇಲಾಖೆ ಮತ್ತು ಪಂಚಾಯಿತಿ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತರದೆ ಕೇವಲ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷರು ಹಾಗೂ ಉಪ ವಲಯ ಅರಣ್ಯಾಧಿಕಾರಿ ಪ್ರಕಾಶ ಕಂಬಾರ ಅವರು ಜಿಪಿಎಸ್ ನಕಾಶೆಗೆ ಸಹಿಮಾಡಿದ್ದಾರೆ ಎಂದು ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ.