ಹಳಿಯಾಳ: ವಿಪರೀತ ಮಳೆಯಿಂದಾಗಿ ಹಳ್ಳಗಳು ಉಕ್ಕಿ ಹರಿದು ರೈತರ ಕೃಷಿ ಭೂಮಿಯಲ್ಲಿ ಮರಳು ತುಂಬಿ ಬೆಳೆಗಳು ನಾಶವಾಗಿದೆ. ಕಾರಣ ಹೊಲದಲ್ಲಿ ಸಂಗ್ರಹವಾಗಿರುವ ಮರಳನ್ನು ರೈತರು ಮಾರಾಟ ಮಾಡಲು ಅವಕಾಶ ನೀಡಬೇಕೆಂದು ಕಂದಾಯ ಸಚಿವರಿಗೆ ಮತ್ತು ಅರಣ್ಯ ಸಚಿವರಿಗೆ ಪತ್ರ ಬರೆದು ಮಾಜಿ ಸಚಿವ, ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಅವರು ಕ್ಯಾಸಲರಾಕ್‍ನಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. 2019ರಲ್ಲಿ ಜೋಯಿಡಾ ತಾಲೂಕಿನಲ್ಲಿ ಸುರಿದ ಮಳೆಯು ಕೃಷಿ ಭೂಮಿಗೆ ವ್ಯಾಪಕ ಹಾನಿಯನ್ನುಂಟು ಮಾಡಿತ್ತು. ಇದರಿಂದ ಆ ಭೂಮಿಯಲ್ಲಿ ಕೃಷಿ ಮಾಡಲು ಸಹ ತೊಂದರೆಯಾಗಿತ್ತು. ಆ ಸಮಯದಲ್ಲಿ ಸರ್ಕಾರವು ಭೂಮಿಯಿಂದ ಮರಳನ್ನು ತೆಗೆದು ಮಾರಾಟ ಮಾಡಲು ರೈತರಿಗೆ ಅವಕಾಶ ನೀಡುವ ಬಗ್ಗೆ ಕ್ರಮ ಕೈಗೊಂಡಿತ್ತು. ಆದರೆ ಅದನ್ನು ಸರಿಯಾಗಿ ಜಾರಿಗೊಳಿಸಲಾಗಿಲ್ಲ. 2021ರಲ್ಲಿ ಇದೇ ಪರಿಸ್ಥಿತಿ ಉಂಟಾಯಿತು ಮತ್ತು ಕೃಷಿ ಭೂಮಿಯು ಮರಳಿನಿಂದ ಆವೃತವಾಗಿದೆ. ಸಿಆರ್‌ಝಡ್ ನಿಯಮಗಳು ಜಾರಿಯಲ್ಲಿದ್ದರೂ ಸಹ ಕರಾವಳಿ ತಾಲೂಕುಗಳಲ್ಲಿ ಮರಳು ತೆಗೆಯುವುದು ಕಾನೂನು ಬದ್ಧವಾಗಿದೆ. ಆದರೆ ಜೋಯಿಡಾ, ಹಳಿಯಾಳ, ಶಿರಸಿ, ಯಲ್ಲಾಪುರ, ಮುಂಡಗೋಡು ತಾಲೂಕುಗಳ ಗುಡ್ಡಗಾಡು ಪ್ರದೇಶಗಳಲ್ಲಿ ಮರಳು ತೆಗೆಯಲು ಯಾವುದೇ ಕಾನೂನು ಅನುಮತಿ ಇಲ್ಲ. ಇದರಿಂದಾಗಿ ಈ ಪ್ರದೇಶದಲ್ಲಿ ಮರಳಿನ ಅಭಾವವಿದ್ದು, ಸರ್ಕಾರ ಅದನ್ನು ಪರಿಹರಿಸಬೇಕು ಎಂದು ದೇಶಪಾಂಡೆ ಹೇಳಿದರು.