ಶಿರಸಿ: ಕರ್ನಾಟಕ ಚುಟುಕು ಸಾಹಿತ್ಯ 9ನೇ ಸಮ್ಮೇಳನ ಅ.3 ರವಿವಾರ ಬೆಳಿಗ್ಗೆ 10;30ಕ್ಕೆ ಶಿರಸಿಯ ರುದ್ರದೇವರ ಮಠ ದಿನಕರ ದೇಸಾಯಿ ವೇದಿಕೆಯಲ್ಲಿ ನಡೆಯಲಿದೆ.
ಸಮ್ಮೇಳನಕ್ಕೆ ಸಚಿವ ಶಿವರಾಮ ಹೆಬ್ಬಾರ ಚಾಲನೆ ನೀಡಲಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವನಕಲ್ಲು ಮಲ್ಲೇಶ್ವರ ಸಂಸ್ಥಾನಮಠದ ಡಾ.ಬಸವ ರಮಾನಂದ ಮಹಾಸ್ವಾಮಿಗಳು ಸರ್ವಾಧ್ಯಕ್ಷರಾಗಿದ್ದು ನಿಕಟಪೂರ್ವ ಸರ್ವಾಧ್ಯಕ್ಷ ಶಿರಸಿ ರುದ್ರದೇವರಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ಕೇಂದ್ರ ಸಮಿತಿಯ ಪ್ರೊ.ಡಿ.ಡಿ.ಎಂ.ದೇಸಾಯಿ, ಕೃಷ್ಣಮೂರ್ತಿ ಕುಲಕರ್ಣಿ, ಚನ್ನಬಸಪ್ಪ ಧಾರವಾಡ ಶೆಟ್ರು, ಪ್ರೊ,ಜಿ.ಯು.ನಾಯಕ, ಮಂಜುನಾಥ ಹೆಗಡೆ ಪಾಲ್ಗೊಳ್ಳುವರು. ಅನಾವರಣಗೊಳ್ಳುವ ಪುಸ್ತಕಗಳ ಕುರಿತು ಗಣಪತಿ ಭಟ್ಟ ವರ್ಗಾಸರ ಮಾತನಾಡುವರು.
ಮಧ್ಯಾಹ್ನ 12 ಗಂಟೆಗೆ ವಿಚಾರಗೋಷ್ಟಿಯ ಅಧ್ಯಕ್ಷತೆಯನ್ನು ಹಿರಿಯ ಶಿಕ್ಷಣ ತಜ್ಞ ಡಾ. ಆರ್.ಎಂ.ಕುಬೇರಪ್ಪ ವಹಿಸಲಿದ್ದು, ವೀರನಗೌಡ ಮರಿಗೌಡ್ರ, ಡಿ.ಎಂ.ಭಟ್ಟ ಕುಳುವೆ, ವಿಜಯಾ ಗಣಪತಿ ಶೆಟ್ಟಿ, ಅಜಿತ್ ನಾಡಿಗ ಉಪನ್ಯಾಸ ನೀಡುವರು. ಕೃಷ್ಣ ಪದಕಿ, ದತ್ತಗುರು ಕಂಠಿ ನಿರೂಪಣೆ ಮಾಡುವರು.
ಊಟದ ವಿರಾಮದ ನಂತರ ರಾಜ್ಯಮಟ್ಟದ ಚುಟುಕು ವಾಚನ ಕಚುಸಾಪ ಸದಸ್ಯರಿಗೆ ಸ್ಫರ್ಧೆ ನಡೆಯಲಿದ್ದು, ಎಸ್.ಐ.ನೇಕಾರ, ಹೊನ್ನಪ್ಪ ಎಚ್.ಆರ್. ಅಮರನಾಥ ನಿರ್ಣಾಯಕರಾಗಿ ಉಪಸ್ಥಿತರಿರುವರು. ಮಧ್ಯಾಹ್ನ 3 ರಿಂದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಿಠ್ಠಲ ಗಾಂವಕರ ವಹಿಸುವರು. ಡಾ.ಸುಮನ್ ಹೆಗಡೆ ಚಾಲನೆ ನೀಡುವರು. ಆರ್.ಎಂ.ಗೋಗೇರಿ ಚಾಲನೆ ನೀಡಲಿದ್ದು ನಾಡಿನ ಹಿರಿ ಕಿರಿಯ ಐವತ್ತಕ್ಕೂ ಹೆಚ್ಚು ಕವಿಗಳು ಕವನ ವಾಚನ ಮಾಡುವರು.
ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭದ ಸಾನಿಧ್ಯವನ್ನು ಉಭಯ ಶ್ರೀಗಳು ವಹಿಸಲಿದ್ದು, ಮೋಹನ ಹಬ್ಬು ಸಮಾರೋಪ ಭಾಷಣ ಮಾಡುವರು. ಮುಖ್ಯ ಅತಿಥಿಯಾಗಿ ಎನ್.ರಾಜೀವ್ ಆಚಾರ್ಯ ಇರುವರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸುಬ್ರಾಯ ಮತ್ತಿಹಳ್ಳಿ, ಸುಭಾಷಿಣಿ ಬೆಳ್ತಂಗಡಿ, ಡಾ .ಮಾಲತಿ ಶೆಟ್ಟಿ, ರಘುಪತಿ ನಾಯಕ, ಡಾ.ಸುರೇಶ ಕಮ್ಮಾರ, ಶೇಖರಗೌಡ ಪಾಟೀಲ ಇರಲಿದ್ದಾರೆ. ಕಚುಸಾಪ ಜಿಲ್ಲಾ ಸಮಿತಿ ಉತ್ತಮ ಕಾರ್ಯ ಚಟುವಟಿಕೆಗಾಗಿ ವಿರೂಪಾಕ್ಷ ಲಮಾಣಿ, ಜಗದೀಶ್ ಸಾಲಳ್ಳಿ, ರಾಧಾಬಾಯಿ ಕೃಷ್ಣ ಶಿರಾಲಿ ಅವರನ್ನು ಬನವಾಸಿಯ ಹೊಳೆಮಠದ ನಾಗಭೂಷಣ ಸ್ವಾಮಿಗಳು ’ಚುಟುಕು ಚೇತನ’ ಪ್ರಶಸ್ತಿ ನೀಡಿ ಗೌರವಿಸುವರು.
ರಾಜು ಉಗ್ರಾಣಕರ, ಭವ್ಯಾ ಹಳೆಯೂರು, ಪ್ರಭಾಕರ ಖೇಡದ, ನಾಗವೇಣಿ ಹೆಗಡೆ ನಿರೂಪಣೆ ಮಾಡುವರು ಎಂದು ಸುದ್ದಿಗೋಷ್ಟಿಯಲ್ಲಿ ಕೃಷ್ಣಮೂರ್ತಿ ಕುಲಕರ್ಣಿ ವಿವರ ನೀಡಿದರು. ರುದ್ರದೇವರಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಡಾ.ಜಿ.ಎ.ಹೆಗಡೆ, ಗಣಪತಿ ಭಟ್ಟ ವರ್ಗಾಸರ ಪತ್ರಿಕಾಗೋಷ್ಟಿಯಲ್ಲಿದ್ದರು.